ಮಂಡ್ಯ : ಮಕ್ಕಳ ಉಜ್ಜಲ ಭವಿಷ್ಯವನ್ನು ರೂಪಿಸುವ ಶಿಕ್ಷಕರುಗಳಿಗೆ ಡಿ.25 ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಸಮೀಪ ಗುರುವಂದನಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕ್ರಮದಲ್ಲಿ ಮದ್ದೂರು ವಿಧಾನ ಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿ, ಪದವಿ ಪೂರ್ವ, ಪ್ರೌಢಶಾಲೆ, ಮಾಧ್ಯಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವ ಶಿಕ್ಷಕರು ಮತ್ತು ಶಿಕ್ಷಕ ವರ್ಗದವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದರು.
ಡಿ.25 ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ ಉದ್ಘಾಟಿಸುವರು. ಸಾಹಿತಿ ಪ್ರೋ.ಎಂ.ಕೃಷ್ಣೇಗೌಡ ಶಿಕ್ಷಕರನ್ನು ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳೀರಯ್ಯ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ಸದಸ್ಯರುಗಳಾದ ಸಿ.ಆರ್.ವಿನುತಾ ಉದಯ್, ಕೆ.ಎಂ.ರವಿ, ಎಂ.ಆರ್. ದಿನೇಶ್ ಬಾಬು, ಸಿಪಾಯಿ ಶ್ರೀನಿವಾಸ್ ಭಾಗವಹಿಸುವರು ಎಂದು ತಿಳಿಸಿದರು.
BREAKING NEWS: ಸಶಸ್ತ್ರ ಪಡೆಗಳ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ | One Rank One Pension
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಮದ್ದೂರು ವಿಧಾನ ಸಭಾ ಕ್ಷೇತ್ರದ ಪ್ರತಿ ಮನೆಗೆ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಔಷಧಿ ಕಿಟ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸಲಕರಣೆ, ಕೋವಿಡ್ ನಿಂದ ಮೃತ ಪಟ್ಟ ಕುಟುಂಬಗಳಿಗೆ ಆರ್ಥಿಕ ಸಹಾಯ, ದೇವಾಲಯಗಳ ಜೀರ್ಣೋದ್ಧಾರ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ, ಅತಿ ವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ತಾತ್ಕಾಲಿಕ ಪರಿಹಾರ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಟ್ರಸ್ಟ್ ವತಿಯಿಂದ ಸಾಮಾಜಿಕ ಸೇವಾ ಕೈಂಕರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಇಂತಹ ಕಾರ್ಯಗಳು ಮುಂದೆಯೂ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಕೆ.ಎಂ.ಉದಯ್ ಆಶ್ವಾಸನೆ ನೀಡಿದರು.
ಇದೇ ವೇಳೆ ಸಿಪಾಯಿ ಶ್ರೀನಿವಾಸ್, ಗೊರವನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಧುಕುಮಾರ್, ಸತೀಶ್, ಶಿವು, ಕರಡಕೆರೆ ಮನು, ಮಧು, ಹರೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ