ಬೆಂಗಳೂರು: ತಂತ್ರಜ್ಞಾನಾಧಾರಿತ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡೂ ಇರುವ ‘ಮಲ್ಲೇಶ್ವರಂ ಸ್ಕೂಲ್ ಮಾಡೆಲ್’ (ಎಂಎಸ್ಎಂ) ಅತ್ಯುತ್ತಮವಾಗಿದ್ದು ಅದನ್ನು ರಾಜ್ಯದ ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದ್ದಾರೆ.
ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಶಾಲೆಯಲ್ಲಿ ( Government School ) ಅವರು ‘ಪುನೀತ್’ ಉಪಗ್ರಹದ ವರ್ಕ್ ಸ್ಟೇಶನ್, ಮಾನಿಟರಿಂಗ್ ವ್ಯವಸ್ಥೆ, ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ 3.50 ಕೋಟಿ ರೂ. ವೆಚ್ಚದ ಸಭಾಂಗಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಕ್ಷೇತ್ರದ ಶಾಸಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಜತೆಯಲ್ಲಿದ್ದರು.
‘ಕೋಟಿ ಕಂಠ ಗಾಯನ’ ಎನ್ನುತ್ತಲೇ ಸರ್ಕಾರ ಕನ್ನಡದ ಕತ್ತು ಸೀಳುವುದಾ ..? : H.D ಕುಮಾರಸ್ವಾಮಿ ವಾಗ್ಧಾಳಿ
ಬಳಿಕ ಮಾತನಾಡಿದ ಅವರು, ‘ಎಲ್ಲ ಮಕ್ಕಳನ್ನೂ ತಮ್ಮ ಮಕ್ಕಳೆಂದು ಭಾವಿಸಿ ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಅಶ್ವತ್ಥನಾರಾಯಣ ಅವರ ಈ ಕೆಲಸವು ಅಂತಃಕರಣದಿಂದ ಆಗುವಂಥದ್ದು. ಕಟ್ಟಡಗಳನ್ನು ಕಟ್ಟುವುದಕ್ಕಿಂತ ಕಲಿಕಾ ವ್ಯವಸ್ಥೆಯ ಸುಧಾರಣೆ, ಆಧುನೀಕರಣ, ಡಿಜಿಟಲೀಕರಣ, ವೈಫೈ, ಬ್ರಾಡ್ಬ್ಯಾಂಡ್, ಲ್ಯಾಪ್ಟಾಪ್ ಮತ್ತು ಕೆವೈಸಿ (ನೋ ಯುವರ್ ಚೈಲ್ಡ್) ವಿಧಾನಗಳ ಅಳವಡಿಕೆಗೆ ಗಮನ ಕೊಟ್ಟಿರುವ ಮಲ್ಲೇಶ್ವರಂ ಶಾಲಾ ಮಾದರಿ ಅನುಕರಣ ಯೋಗ್ಯವಾಗಿದೆ’ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ 75 ಉಪಗ್ರಹಗಳಲ್ಲಿ ಮಲ್ಲೇಶ್ವರಂ ಸರಕಾರಿ ಶಾಲೆಯ ಮಕ್ಕಳು ನಿರ್ಮಿಸುತ್ತಿರುವ ಪುನೀತ್ ಉಪಗ್ರಹವೂ ಒಂದಾಗಿದೆ. ಈ ಮಕ್ಕಳು ದೊಡ್ಡ ಮತ್ತು ಬಹೂಪಯೋಗಿ ಉಪಗ್ರಹ ಅಭಿವೃದ್ಧಿಗೆ ಮುಂದಾದರೆ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ. ಸಮಾಜಮುಖಿಯಾಗಿದ್ದ ನಟ ಪುನೀತ್ ಅವರಿಗೆ ಇದು ಅವರ ಪ್ರಥಮ ಪುಣ್ಯತಿಥಿಯಂದು ಸಲ್ಲಿಸುತ್ತಿರುವ ಸೂಕ್ತ ಗೌರವವಾಗಿದೆ ಎಂದು ಅವರು ಬಣ್ಣಿಸಿದರು.
ಮಲ್ಲೇಶ್ವರಂ ಶಾಲಾ ಮಾದರಿಯು ಮಕ್ಕಳಲ್ಲಿ ಬುದ್ಧಿಶಕ್ತಿ, ಕಲ್ಪನಾಶಕ್ತಿ, ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆಗಳನ್ನು ಬೆಳೆಸುತ್ತದೆ. ಇದರ ಜತೆಗೆ ನೈತಿಕ ಮತ್ತು ಗುಣಾತ್ಮಕ ಕಲಿಕೆಯ ಗುರಿಯನ್ನು ಸಾಧಿಸಬೇಕು ಎಂದು ಅವರು ನುಡಿದರು.
ಏನಿದು ಮಲ್ಲೇಶ್ವರಂ ಶಾಲಾ ಮಾದರಿ?
ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ‘ಮಲ್ಲೇಶ್ವರಂ ಶಾಲಾ ಮಾದರಿಯನ್ನು ಮೂಲಸೌಕರ್ಯ, ವಿದ್ಯಾರ್ಥಿಗಳ ಯೋಗಕ್ಷೇಮ, ಸಮರ್ಥ ಶಿಕ್ಷಕರು, ಕೆವೈಸಿ (ನೋ ಯುವರ್ ಚೈಲ್ಡ್), ಡಿಜಿಟಲ್ ಕಲಿಕಾ ವ್ಯವಸ್ಥೆ ಮತ್ತು ಪಠ್ಯೇತರ ಚಟುವಟಿಕೆಗಳು ಎಂಬ ಆರು ಅಂಶಗಳ ಮೇಲೆ ವೈಜ್ಞಾನಿಕವಾಗಿ ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೂಡ ಇಂತಹ ವೈಜ್ಞಾನಿಕ ವಿಧಾನಕ್ಕೆ ಒತ್ತು ಕೊಡಲಾಗಿದೆ ಎಂದರು.
ಎಲ್ಲಾ ಸರಕಾರಿ ಶಾಲೆಗಳಿಗೂ ಹೈಟೆಕ್ ಪ್ರಯೋಗಾಲಯ, ಆಟದ ಮೈದಾನ, ಗ್ರಂಥಾಲಯ ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುವುದು. ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಆಪ್ತ ಸಮಾಲೋಚನೆ, ಕೆವೈಸಿಯಲ್ಲಿ ಕಲಿಕೆಗೆ ಮಾಹಿತಿ ತಂತ್ರಜ್ಞಾನದ ಬಳಕೆಯ ಜತೆಗೆ ಮಗುವಿನ ಆಸಕ್ತಿ, ಕಲಿಕೆಯ ವೇಗ ಮತ್ತು ಅಗತ್ಯ ಮಾಹಿತಿಗಳ ಸಂಗ್ರಹಣೆ ನಡೆಯಲಿದೆ ಎಂದು ಅವರು ಹೇಳಿದರು.
ಡಿಜಿಟಲ್ ಕಲಿಕೆಯಲ್ಲಿ ಮಕ್ಕಳಿಗೆ ಐಎಫ್ಎಲ್ಎನ್ (ಇಂಟೆಗ್ರೇಟೆಡ್ ಫೌಂಡೇಶನಲ್ ನ್ಯೂಮರಸಿ & ಲಿಟರಸಿ) ಮತ್ತು ಇಪಿಬಿಎಲ್ (ಎಲೆಕ್ಟ್ರಾನಿಕ್ ಪ್ರಾಜೆಕ್ಟ್ ಬೇಸ್ಡ್ ಲರ್ನಿಂಗ್) ವಿಧಾನ, ಸಂವಹನ ಕೌಶಲ್ಯ, ಸ್ಪೋಕನ್ ಇಂಗ್ಲಿಷ್ ಮತ್ತು ಪ್ರೋಗ್ರಾಮಿಂಗ್ಗಳನ್ನು ಕಲಿಸಲಾಗುವುದು. ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಗಳಲ್ಲಿ ಮಾಂಟೆಸರಿ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಶಿಕ್ಷಣ ಫೌಂಡೇಶನ್ನ ಸಂಸ್ಥಾಪಕ ಪ್ರಸನ್ನ ಮಾತನಾಡಿ, ಮುಂದುವರಿದ ದೇಶಗಳಲ್ಲಿ ಪಬ್ಲಿಕ್ ಶಾಲೆಗಳಿದ್ದು, ಅತ್ಯುತ್ತಮ ಶಿಕ್ಷಣ ಒದಗಿಸುತ್ತಿವೆ. ಇದು ‘ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾದರಿ’ಯಾಗಿದೆ. ಇದರ ಅಂಗವಾಗಿ ‘ಓದು ಮಲ್ಲೇಶ್ವರಂ’ ಉಪಕ್ರಮವನ್ನೂ ರೂಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿಜ್ಞಾನ- ತಂತ್ರಜ್ಞಾನ ಇಲಾಖೆಯ ಪುರಸ್ಕಾರಕ್ಕೆ ಪಾತ್ರವಾಗಿರುವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೀರ್ತಿ ಪಟೇಲ್ ಅವರನ್ನು ಗೌರವಿಸಲಾಯಿತು.
ಕೆಸ್ಟೆಪ್ಸ್ ನ ನಿರ್ದೇಶಕ ಬಸವರಾಜ, ಬಿಇಒ ಉಮಾದೇವಿ, ಮಲ್ಲೇಶ್ವರ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಮಾ ಇದ್ದರು.