ಮಂಡ್ಯ : ಮಳವಳ್ಳಿ ಬಾಲಕಿ ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಂಸದೆ ಸುಮಲತಾ ಅಂಬರೀಷ್ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಇಂದು ನಡೆದ ಮಹಾಕುಂಭಮೇಳ ಸಮಾರಂಭದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್ ‘ಮಳವಳ್ಳಿ ಬಾಲಕಿ ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು , ಮಗುವಿನ ಪೋಷಕರ ನೋವು ಯಾರು ಭರಿಸಲು ಆಗುವುದಿಲ್ಲ. ಪೋಕ್ಸೋ ಅಥವಾ ಯಾವುದಾದರೂ ಸೆಕ್ಷನ್ ಹಾಕಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು , ಕಠಿಣ ಶಿಕ್ಷೆ ನೀಡುವ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ ಹೊರಬೇಕು ಎಂದು ಸುಮಲತಾ ಮನವಿ ಮಾಡಿದರು.
ಬಾಲಕಿಯ ಕುಟುಂಬದವರಿಗೆ ರೂ. 10 ಲಕ್ಷ ಪರಿಹಾರ
ಮಳವಳ್ಳಿಯಲ್ಲಿ ಇತ್ತೀಚೆಗೆ ಅತ್ಯಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬದವರಿಗೆ ರೂ. 10 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶ್ರೀ ಮಲೆಮಹಾದೇಶ್ವರ ಕುಂಭಮೇಳದ ಸಾಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮಳವಳ್ಳಿ ಘಟನೆ ಬಗ್ಗೆ ಎಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಎಂದಿಗೂ ಇಂಥದ್ದು ನಡೆಯಬಾರದು. ಅತ್ಯಂತ ಅಮಾನುಷ ಕೃತ್ಯವಿದು. ಮನುಷ್ಯತ್ವವಿಲ್ಲದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ . ಇದನ್ನು ಶಬ್ದಗಳಲ್ಲಿ ಖಂಡಿಸಲಾಗದು. ಅರಿಯದ ಕಂದಮ್ಮನ ಪರಿಸ್ಥಿತಿ ಕೇಳಿದರೆ ಕರಳು ಕಿವುಚಿಬರುತ್ತದೆ. ಈಗಾಗಲೇ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ. ಎಲ್ಲ 302, 307, ಪೋಕ್ಸೋ ಸೆಕ್ಷನ್ ಗಳನ್ನು ಹಾಕಿ ದ್ದಾರೆ. ನಮ್ಮ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ಸೂಚನೆ ನೀಡಿ ಕೂಡಲೇ ತನಿಖೆಯಾಗಿ ತಪ್ಪಿ ತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಸೂಚಿಸಿದ್ದೆ. ಅವರು ಎಫ್.ಎಸ್.ಎಲ್ ವರದಿ ಒಂದು ವಾರದಲ್ಲಿಯೇ ನೀಡಲಾಗುವುದೆಂದು ಹೇಳಿದ್ದು, ಬಂದ ಕೂಡಲೇ ಆರೋಪ ಪಟ್ಟಿ ಸಿದ್ಧಪಡಿಸಿ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿ, ಆದಷ್ಟು ಬೇಗ ನ್ಯಾಯ ನೀಡಲು ಕ್ರಮ ಕೈಗೊಂಡು ಇನ್ನೊಮ್ಮೆ ಹೀಗಾದರೆ ಅತಿ ಕಡಿಮೆ ಸಮಯದಲ್ಲಿ ಉಗ್ರ ಶಿಕ್ಷೆ ಈ ವ್ಯವಸ್ಥೆ ನೀಡಲಿದೆ ಎಂಬ ಸಂದೇಶವನ್ನು ಸಾರಲಾಗುವುದೆಂದು ಈ ಪ್ರಕರಣದಲ್ಲಿ ಸಾಬೀತು ಮಾಡುತ್ತೇವೆ ಎಂದರು.
=.