ಮಂಡ್ಯ : ಮದ್ದೂರು – ಕೊಪ್ಪ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಲೋಕೋಪಯೋಗಿ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹೊಸಕೆರೆ, ನಿಲುವಾಗಿಲು, ಕೋಡಿಹಳ್ಳಿ, ಸೀನಪ್ಪನದೊಡ್ಡಿ, ಬೆಸಗರಹಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮದ್ದೂರು – ಕೊಪ್ಪ ರಸ್ತೆಯಲ್ಲಿ ದಿನ ದಿನಕ್ಕೂ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ರಸ್ತೆಯು ನಾಗಮಂಗಲ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ನಾನು ಇಬ್ಬರು ಕೂಡ ಮೇಲ್ದರ್ಜೆಗೆ ಏರಿಸುವ ವಿಚಾರವಾಗಿ ಈಗಾಗಲೇ ಚರ್ಚೆ ನಡೆಸಿದ್ದು, ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶೀಘ್ರದಲ್ಲೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅವುಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ 70 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನಾಲೆಗಳು, ರಸ್ತೆ, ಚರಂಡಿ, ಪಶು ಇಲಾಖೆ, ಅಂಗನವಾಡಿ, ಶಾಲಾ ಕಟ್ಟಡ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಇನ್ನು ಕೆಲ ದಿನಗಳಲ್ಲೇ 18 ಕೋಟಿ ರೂ ವೆಚ್ಚದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಉದಯ್, ಮುಖ್ಯಮಂತ್ರಿ ಬದಲಾವಣೆ ಆಗುವ ಸಂದರ್ಭದಲ್ಲಿ ಯಾರು ಸಿಎಂ ಆಗಬೇಕೆನ್ನುವುದನ್ನು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ಅದರ ಬಗ್ಗೆ ಯಾರು ಕೂಡ ಚರ್ಚೆ ನಡೆಸುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಮುನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ್, ಗ್ರಾಪಂ ಮಾಜಿ ಸದಸ್ಯ ಬಾಬು, ಸುಧಾಕರ್, ಶೇಖರ್, ಶರತ್, ಕೆ.ಟಿ.ಶಿವಕುಮಾರ್, ಅಮರ್, ನಿಲುವಾಗಿಲು ಗ್ರಾಪಂ ಆಡಳಿತಾಧಿಕಾರಿ ಗೋವಿಂದ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








