ಬೆಂಗಳೂರು : ರಾಜ್ಯದಲ್ಲಿ ಚರ್ಮಗಂಟು ರೋಗ ಆತಂಕ ಉಂಟು ಮಾಡಿದ್ದು, ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಚರ್ಮಗಂಟು ರೋಗದ ಲಸೀಕೆ ಖರೀದಿಗೆ 5 ಕೋಟಿ ಬಿಡುಗಡೆಗೆ ಹಾಗೂ ಇತರೆ ಔಷಧಿ ಖರೀದಿಗೆ 8 ಕೋಟಿ ಬಿಡುಗಡೆ ಮಾಡುವಂತೆ ಪಶು ಸಂಗೋಪನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಾನುವಾರು ಜಾತ್ರೆ, ಜಾನುವಾರು ಸಂತೆ , ಸಾಗಾಣಿಕೆ ನಿಷೇಧ
ರಾಜ್ಯದಲ್ಲಿ ಚರ್ಮಗಂಟು ರೋಗ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜಾನುವಾರು ಜಾತ್ರೆ, ಜಾನುವಾರು ಸಂತೆ ಮತ್ತು ಸಾಗಾಣಿಕೆಯನ್ನು ನಿಷೇಧಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಚರ್ಮಗಂಟು ರೋಗದ ಕುರಿತು ಮುಂಜಾಗ್ರತಾ ಕ್ರಮವಾಗಿ ಕರಪತ್ರಗಳು, ಪೋಸ್ಟರ್, ಬ್ಯಾನರ್ ಹಾಗೂ ಸ್ಥಳೀಯವಾಗಿ ಪಶು ವೈದ್ಯರು, ಪಶುಸಂಗೋಪನೆ ಇಲಾಖಾ ಅಧಿಕಾರಿಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಹಾಗೂ ಜಾನುವಾರು ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ಕಚ್ಚುವ ನೊಣಗಳು, ವೈರಾಣುಗಳಿಂದ ಜಾನುವಾರುಗಳಿಗೆ ಹರಡುತ್ತದೆ. ರೋಗ ಕಾಣಿಸಿಕೊಂಡ ಪ್ರದೇಶ ಹಾಗೂ ಸುತ್ತಮುತ್ತಲಿನ 5 ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ರೋಗಪೀಡಿತ ರಾಸುಗಳಿಂದ ಆರೋಗ್ಯವಂತ ರಾಸುಗಳನ್ನು ಬೇರ್ಪಡಿಸಿ, ಕೂಡಲೇ ಸ್ಥಳೀಯ ಪಶು ವೈದ್ಯರು ಸಂಪರ್ಕಿಸಿ ಎಂದರು.,
ಚರ್ಮಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ವೈರಾಣು ಮುಖ್ಯ ಕಾರಣ. ಈಗಾಗಲೇ ಜಾನುವಾರು ರೋಗದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಜತೆಗೆ ಔಷಧ-ಆರೈಕೆ ಸಿಗಬೇಕು. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.ಅತಿಯಾದ ಜ್ವರ, ಆಹಾರ ನಿರಾಕರಣೆ, ಹಾಲಿನ ಇಳುವರಿ ಕಡಿಮೆಯಾಗುವುದು, ಮೈಮೇಲೆ 2-5 ಸೆ.ಮೀ ಗಾತ್ರದ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಗಂಟುಗಳು ಸಿಪ್ಪೆ ಸುಲಿದಂತೆ ಒಡೆದು ವ್ರಣವಾಗುವ ರೋಗ ಲಕ್ಷಣಗಳು ಜಾನುವಾರುಗಳಲ್ಲಿ ಕಂಡುಬಂದರೆ ಕೂಡಲೇ ಸಮೀಪದ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಪ್ರಭು ಚವ್ಹಾಣ್ ಕೋರಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಆಸ್ತಿ ವಿಚಾರಕ್ಕಾಗಿ ಸೊಸೆಯಿಂದಲೇ ಅತ್ತೆಯ ಬರ್ಬರ ಹತ್ಯೆ