ಲಕ್ನೋ : ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಹರಡಿದ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ಹಂದಿ ಮಾಂಸ ಮತ್ತು ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಆಫ್ರಿಕನ್ ಹಂದಿ ಜ್ವರದಿಂದಾಗಿ 100 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ನಿಷೇಧ ಹೇರಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (ಎಲ್ಎಂಸಿ) ಮತ್ತು ಪಶುಸಂಗೋಪನೆ ಇಲಾಖೆಗೆ ಹಂದಿಗಳಲ್ಲಿ ಈ ರೋಗ ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಇದಲ್ಲದೆ ಸೋಂಕು ಹರಡುತ್ತಿರುವ ಪ್ರದೇಶಗಳಲ್ಲಿ ಶುಚಿಗೊಳಿಸುವಿಕೆ ಮತ್ತು ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಹಂದಿ ಮಾಂಸವನ್ನು ನಿಷೇಧಿಸಲಾಗಿದ್ದು, ರೋಗ ಪೀಡಿತ ಪ್ರದೇಶಗಳಲ್ಲಿ ಹಂದಿಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಇದರ ಜೊತೆಗೆ ಆಫ್ರಿಕನ್ ಹಂದಿ ಜ್ವರದ ಬಗ್ಗೆ ಅರಿವು ಮೂಡಿಸಲು ಹಂದಿ ಸಾಕಣೆದಾರರಿಗೆ ಜಾಗೃತಿ ಅಭಿಯಾನ ಪ್ರಾರಂಭಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಎಲ್ಎಂಸಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಸೋಂಕಿತ ಹಂದಿಗಳಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹಂದಿಗಳು ಬಯಲಿನಲ್ಲಿ ಓಡಾಡದಂತೆ ರೈತರು ಅವುಗಳನ್ನು ಆವರಣದಲ್ಲೇ ಇಡುವಂತೆ ಸೂಚಿಸಿದ್ದಾರೆ.