ಸಿನಿಮಾ ಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿರುವ ‘ಲವ್ ಸೀಸನ್ಸ್’ ಚಿತ್ರದ ಸಂಗೀತ ಪಯಣ ಅಧಿಕೃತವಾಗಿ ಆರಂಭವಾಗಿದ್ದು, ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ “ಮಳೆಯಾಗೋ ಮೊದಲೇ” ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೃತ್ವಿಕ್ ನಿರ್ದೇಶನದ ಈ ಚಿತ್ರವು ಒಂದು ಸುಂದರ ಪ್ರೇಮಕಥೆಯನ್ನು ಹೊತ್ತು ತರುತ್ತಿದ್ದು, ಆರಂಭದಲ್ಲೇ ತನ್ನ ಇಂಪಾದ ಸಂಗೀತದ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಹಾಡಿನ ವಿಶೇಷತೆಯೆಂದರೆ, ಇದಕ್ಕೆ ‘ಕಾಂತಾರ’ ಖ್ಯಾತಿಯ ಸಾಹಿತಿ ಪ್ರಮೋದ್ ಮರವಂತೆ ಅವರು ಅತ್ಯಂತ ಮೋಹಕವಾಗಿ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬಾಲಿವುಡ್‌ನ ಸ್ಟಾರ್ ಗಾಯಕ ಅರ್ಮಾನ್ ಮಲಿಕ್ ಮತ್ತು ಸರೆಗಮಪ ಸೀಸನ್ 10ರ ಪ್ರತಿಭೆ ಪ್ರಜ್ಞಾ ಮರಾಠೆ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ‘ಎನ್.ಆರ್ ಸ್ಟುಡಿಯೋ’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದ ತಾರಾಗಣವೂ ಅಷ್ಟೇ ಸಮೃದ್ಧವಾಗಿದ್ದು, ನಾಯಕನಾಗಿ ಮುಕುಂದ ರಾಮಸ್ವಾಮಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಚೇತನ್ ದುರ್ಗ ಹಾಗೂ ಹುಲಿ ಕಾರ್ತಿಕ್ ಅಂತಹ ಅನುಭವಿ ಕಲಾವಿದರು ಚಿತ್ರದ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಾಂತ್ರಿಕವಾಗಿ ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಅವರ ಸಂಕಲನ ಚಿತ್ರಕ್ಕಿದೆ.
ನಿರ್ದೇಶಕ ಕೃತ್ವಿಕ್ ಹಾಗೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಹೇಳುವಂತೆ, ಈ ಚಿತ್ರದ ಹಾಡುಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಕಥೆಗೆ ಪೂರಕವಾಗಿ ಸಾಗಲಿವೆ. ಎನ್.ಆರ್ ಮಂಜುನಾಥ (ನೀಲೇರಿ) ಅವರ ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಲವ್ ಸೀಸನ್ಸ್’ ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗುತ್ತಿದೆ. ಮೊದಲ ಹಾಡಿಗೆ ಸಿಕ್ಕಿರುವ ಭರ್ಜರಿ ಯಶಸ್ಸು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.








