ರಾಮನಗರ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರು ಕ್ಷೇತ್ರವಾದ ಕನಕಪುರದಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದ್ದು, ಕನಕಪುರ ನಗರದ ಮಳಗಾಳಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಒಬ್ಬನ ಕೈ ಕತ್ತರಿಸಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ.
ಹೌದು ಈ ಒಂದು ಘಟನೆಯಲ್ಲಿ ಮಳಗಾಳಿನ ಅನಿಶ್ ಕುಮಾರ್ ಎಡಗೈ ತುಂಡಾಗಿದೆ, ಇವರ ಸಂಬಂಧಿ ಲಕ್ಷ್ಮಣ್ ಮತ್ತು ಗೊಂವಿಂದರಾಜುಗೆ ಭುಜ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.ಪ್ರಕರಣದ ಆರೋಪಿಗಳನ್ನು ರೌಡಿ ಶೀಟರ್ ಹರ್ಷ ಅಲಿಯಾಸ್ ಕೈಮಾ, ಈತನ ಸಹಚರರಾದ ಕರ್ಣೇಶ್ ಅಲಿಯಾಸ್ ಕನ್ನು, ಶಿವ, ರಾಹುಲ್, ಶಶಾಂಕ್ ಸೇರಿದಂತೆ 6 ಮಂದಿ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈ ಕಳೆದುಕೊಂಡಿರುವ ಅನಿಶ್ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದು, ತಲೆ ಮತ್ತು ಭುಜದಲ್ಲಿ ಗಾಯಗೊಂಡಿರುವ ಲಕ್ಷ್ಮಣ್, ಗೋವಿಂದರಾಜು ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಡಿವೈಎಸ್ಪಿ ಗಿರಿ, ನಗರ ಠಾಣೆಯ ಆರಕ್ಷಕ ನಿರೀಕ್ಷಕ ಮಿಥುನ್‌ಶಿಲ್ಪಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಗಾಯಾಳು ಲಕ್ಷ್ಮಣ್ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿಪ್ರಕರಣ ದಾಖಲಿಸಿರುವ ಪೊಲೀಸರು, ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.