ಕೊಪ್ಪಳ: ದೇಶದಲ್ಲಿ ಜಾತಿ, ಧರ್ಮಗಳ ಬಗ್ಗೆ ಚರ್ಚೆಯಾಗದೇ ಅಭಿವೃದ್ಧಿಗಳ ಬಗ್ಗೆ ಚರ್ಚೆಗಳಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಅಭಿಪ್ರಾಯಪಟ್ಟರು.
ಸೋಮವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣೆಗಳಿಗೆ ಅವಕಾಶವಿದೆ. ಆದರೆ, ಇಂದು ವೈಯಕ್ತಿಕವಾಗಿ ಟೀಕೆ ಟಿಪ್ಪಣೆಗಳಾಗುತ್ತಿದ್ದು, ಅರ್ಥಗರ್ಭಿತ ಮತ್ತು ಸಾಮರಸ್ಯವಾದಂತಹ ಟೀಕೆ ಟಿಪ್ಪಣೆಗಳು ಆಗಬೇಕಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವವಿದ್ದು, ಪ್ರತಿಯೊಬ್ಬರು ಹೆಚ್ಚಿನ ಪ್ರಮಾಣದಲ್ಲಿ ಶೇ.100 ರಷ್ಟು ಮತದಾನ ಮಾಡಿದಾಗ ನಾವು ಭಾರತ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರತಿ ವರ್ಷ ಒಂದೊಂದು ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. “ನನ್ನ ಮತ ನನ್ನ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳ ವಿಶೇಷವಾದ ದಿನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಬಹಳ ಜವಾಬ್ದಾರಿಯುತವಾಗಿದ್ದು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಮತದಾನಕ್ಕೆ ದೊಡ್ಡ ಶಕ್ತಿಯನ್ನು ನೀಡಿದ್ದರು. ನಮ್ಮ ದೇಶದಲ್ಲಿ ಮೊದಲು ರಾಜ ಮಹರಾಜರ ಕಾಲದಲ್ಲಿ ಕೆಲವೇ ಕೆಲವು ಜನರಿಗೆ ಮತದಾನ ಸೀಮಿತವಾದಂತಹ ವ್ಯವಸ್ಥೆಗಳಿದ್ದವು. ಭಾರತ ಸಂವಿಧಾನ ರಚನೆಯಾದ ನಂತರ ನಮ್ಮ ದೇಶದಲ್ಲಿನ ಎಲ್ಲಾ ರಾಜ್ಯಗಳಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಎಲ್ಲರಿಗೂ ಮತದಾನದ ಹಕ್ಕು ನೀಡಲಾಯಿತು. ವಿಶೇಷವಾಗಿ ಮಹಿಳೆಯರಿಗೂ ಹಕ್ಕನ್ನು ಒದಗಿಸಿ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪ್ರತಿಯೊಂದು ಸಮಾಜದವರು ನೆನಪಿಸಿಕೊಳ್ಳಬೇಕು. ನಾನು ಸಹ ಈ ರಾಜ್ಯದ ಮಂತ್ರಿಯಾಗಿ, ಶಾಸಕನಾಗಿರುವುದಕ್ಕೆ ಬಾಬಾ ಸಾಹೇಬರು ಕೊಟ್ಟ ಕೊಡುಗೆಯಾಗಿದೆ ಎಂದರು.
ದೇಶದಲ್ಲಿ ಈ ಹಿಂದೆ 25 ವರ್ಷ ಇದ್ದವರಿಗೆ ಮಾತ್ರ ಮತದಾನ ಹಕ್ಕಿತ್ತು. ಆದರೆ, ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ದಿ. ರಾಜೀವ್ ಗಾಂಧಿ ಅವರು ಈ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡುವುದುರ ಜೊತೆಗೆ ದೇಶದ ಯುವಕರಿಗೆ ಮತದಾನದ ಹಕ್ಕನ್ನು 18ನೇ ವರ್ಷಕ್ಕೆ ಇಳಿಕೆ ಮಾಡಿ, ಯುವಜನತೆ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಮತದಾನದ ಹಕ್ಕು ಎಲ್ಲರ ಜವಾಬ್ದಾರಿಯಾಗಿದ್ದು, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರತಿವರ್ಷ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾ.ಬ.ಕೊ.ವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ನಗರಸಭೆ ಅಧ್ಯಕ್ಷ ಅಮ್ಜದ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಗೃತಿ ಜಾಥಾ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಅಂದು ಬೆಳಿಗ್ಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನದವರೆಗೆ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ
BIG NEWS : ದಸರಾ ಉದ್ಘಾಟನೆ, ಮುಲ್ಲಾಗಳ ಪ್ರಕಾರ ನಡೆಯುತ್ತಿದೆ : ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ