ಬೆಂಗಳೂರು: ಸುದ್ದಿ ಮನೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿ, ಸಂಜೆ ಪತ್ರಿಕೆಗೆ ಸುದ್ದಿ ಮೆರಗು ನೀಡಿದ ಅ.ಚ.ಶಿವಣ್ಣ ಅವರು, ಪತ್ರಕರ್ತರ ವೃತ್ತಿಗೂ ವಿಶ್ವಾಸರ್ಹತೆ ತಂದವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು.
ಜಯನಗರದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 1980 ದಶಕದಲ್ಲಿ ಮೊಬೈಲ್ ಗಳು ಇಲ್ಲದ ಸಂದರ್ಭದಲ್ಲಿ ಪೊಲೀಸ ಇಲಾಖೆ ಮಾತ್ರ ಬಳಸುತ್ತಿದ್ದ ವಾಕೀಟಾಕಿಯನ್ನು ಸರ್ಕಾರದೊಂದಿಗೆ ಹೋರಾಟ ಮಾಡಿ ಅನುಮತಿ ಪಡೆದು, ಸುದ್ದಿ ನೀಡಲು ಬಳಸಿದ ಹೆಗ್ಗಳಿಕೆ ಶಿವಣ್ಣ ಅವರದು ಎಂದರು.
ಮನೆಯಂಗಳದಲ್ಲಿ ಸನ್ಮಾನ ಕಾರ್ಯಕ್ರಮಕ್ಕಾಗಿ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡಿದ್ದನ್ನು ಮರೆಯುವಂತಿಲ್ಲ. ಕೆಯುಡಬ್ಲೂೃಜೆ ಪ್ರಶಸ್ತಿ ನೀಡಿದ್ದಾಗಲೂ ಸಂಭ್ರಮಿಸಿದ್ದರು. ಮಾಧ್ಯಮ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿದ್ದಾಗ ಅಭಿಮಾನದಿಂದ ಹಿಗ್ಗಿದ್ದರು ಎಂದರು.
ಕೆಎಸ್‌ಆರ್‌ಪಿ ಆಯುಕ್ತ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಮಾತನಾಡಿ, ಅ ಚ ಶಿವಣ್ಣ ಅವರು ಮುಂಗೋಪಿಯಾದರೂ, ಅವರ ಮನಸ್ಸು ತುಂಬಾ ಮೃದು. ಯಾರನ್ನೇ ಜೋರಾಗಿ ಮಾತನಾಡಿಸಿದರೆ ನಂತರ ಅವರೊಡನೆ ಸಮಾಧಾನವಾಗಿ ಮಾತನಾಡುವ ಹವ್ಯಾಸ ರೂಢಿಸಿಕೊಂಡಿದ್ದರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಈಶ್ವರ ದೈ ತೋಟ ಮಾತನಾಡಿ, ಸಾಕಷ್ಟು ಕಿರಿಯ ಪತ್ರಕರ್ತರುಗಳಿಗೆ ಶಿವಣ್ಣ ದಾರಿ ದೀಪವಾಗಿದ್ದು ತಮ್ಮೊಡನೆ ಇತರರನ್ನು ಬೆಳೆಸಿದ ಕೀರ್ತಿಯೂ ಅವರದ್ದಾಗಿದೆ ಎಂದರು.
ಸಂಜೆವಾಣಿ ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್ ಬಿಟಿ ಅಮುಧನ್, ಹಿರಿಯ ಪತ್ರಕರ್ತರಾದ ಕೆ.ಶೇಷಚಂದ್ರಿಕಾ, ಬಿ.ಪಿ.ಮಲ್ಲಪ್ಪ, ರು ಬಸಪ್ಪ, ಸುನಂದ, ರಾಜಕುಮಾರ್, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಬಿಟಿಎಂ ರೆಸಿಡೆನ್ಷಿಯಲ್ ಅಸೋಸಿಯೇಷನ್ ಕೃಷ್ಣಾರೆಡ್ಡಿ ಮಲ್ಲಿಕಾರ್ಜುನ್, ಎಸ್‌ವಿಎನ್ವಿ ಎಂ ಎಸ್ ಕೃಷ್ಣಮೂರ್ತಿ, ಮಧು, ಚೈತ್ರ, ಸ್ವರ್ಣ ಗೌರಿ, ಮಹದೇವ್ ಸೇರಿದಂತೆ ನೂರಾರು ಮಂದಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಟುಂಬ ವರ್ಗದವರಾದ ಇಂದಿರಾ ಶಿವಣ್ಣ, ಡಾ. ದೀಪಕ್ ಮತ್ತಿತರರು ಭಾಗವಹಿಸಿದ್ದರು.
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ








