ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವಂತ ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾರಿಗೊಂಡ 10 ದಿನಗಳಲ್ಲಿ ಬರೋಬ್ಬರಿ 1280 ಸಿಬ್ಬಂದಿಗಳು ಈ ಯೋಜನೆಯಡಿ ಚಿಕಿತ್ಸೆಯನ್ನು ಪಡೆದಿದ್ದಾರೆ.
ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆ ಯು ಸಾರಿಗೆ ನೌಕರರ ದಶಕಗಳ ಬೇಡಿಕೆ. ಅದನ್ನು ಸಾಕಾರಗೊಳಿಸಲು ನಿಗಮವು ಕರ್ನಾಟಕ ರಾಜ್ಯಾದ್ಯಂತ ಇಂದಿನವರೆಗೆ 314 ಆಸ್ಪತ್ರೆಗಳೊಂದಿಗೆ ಒಡಂಬಂಡಿಕೆ ಮಾಡಿಕೊಂಡಿದೆ. ಈ ಯೋಜನೆಯು ನಿಗಮದ ಅತಿ ದೊಡ್ಡ ಯೋಜನೆಯಾಗಿದ್ದು, 34000 ಸಿಬ್ಬಂದಿಗಳು, ಅವರ ಪತಿ/ಪತ್ನಿ ಮಕ್ಕಳು, ತಂದೆ ತಾಯಿ ಒಳಗೊಂಡಂತೆ ಸರಿ ಸುಮಾರು 1.50 ಲಕ್ಷ ಫಲಾನುಭವಿಗಳಿಗೆ 300 ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಪ್ರತಿ ನಿಮಿಷ ವ್ಯವಹರಿಸಿ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿದೆ ಎಂಬುದಾಗಿ ತಿಳಿಸಿದೆ.
ಈ ಯೋಜನೆಯು ಪ್ರಾರಂಭಗೊಂಡು ನೆನ್ನೆಗೆ 10 ದಿವಸಗಳಷ್ಟೇ ಆಗಿದೆ. ಇಲ್ಲಿಯವರೆಗೆ ಅಂದರೆ 17-01-2025 ಬೆಳಗ್ಗೆ 11 ಗಂಟೆಯವರೆಗೆ 1280 ಸಿಬ್ಬಂದಿಗಳು ಆರೋಗ್ಯ ಸೇವೆ ಪಡೆದಿದ್ದು, ಅದರಲ್ಲಿ 243 ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದು ಮೊತ್ತ ರೂ.56,56,639-00 ಹೊರ ರೋಗಿಗಳಾಗಿ ಒಟ್ಟು 1047 ಸಿಬ್ಬಂದಿಗಳು ಸೇವೆ ಪಡೆದಿದ್ದು ಮೊತ್ತ ರೂ. 11,66,487 -00 ಗಳಾಗಿರುತ್ತದೆ ಕಳೆದ 10 ದಿನಗಳ ಒಟ್ಟು ಮೊತ್ತ ರೂ.68,23,126 ಗಳಾಗಿರುತ್ತದೆ ಎಂದು ಹೇಳಿದೆ.
ಈ ಯೋಜನೆಯಲ್ಲಿ ಆಸ್ಪತ್ರೆಗಳ ಸಹಕಾರ ಬಹಳ ಮುಖ್ಯವಾಗಿದೆ. ಕೆಲವೊಂದು ಸಣ್ಣಪುಟ್ಟ ವ್ಯತ್ಯಾಸಗಳು ಪ್ರಾರಂಭದಲ್ಲಿ ಸಹಜವಾಗಿದ್ದು, ಸರಿಪಡಿಸಿಕೊಂಡು, ನಡೆಸಬೇಕಾಗಿರುತ್ತದೆ. ನಿಗಮದ ಎಲ್ಲಾ ವಿಭಾಗಗಳ ಅಧಿಕಾರಿಗಳು ದಿನಂಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. 10 ದಿನಗಳಲ್ಲಿ 1200 ಸಿಬ್ಬಂದಿಗಳು ವಿವಿಧ ಆಸ್ಪತ್ರೆಗೆ ಹೋಗಿ ಸೇವೆ ಪಡೆಯಲು ಸಾಧ್ಯವಾಗಿರುವುದು ಕೆ ಎಸ್ ಆರ್ ಟಿ ಸಿ ಆರೋಗ್ಯ ಯೋಜನೆಯು ಸರಿಯಾದ ದಾರಿಯಲ್ಲಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂಬುದಾಗಿ ತಿಳಿಸಿದೆ.