ಕೋಲ್ಕತ್ತಾ: ಹುಟ್ಟಿದ ಅರ್ಧ ಗಂಟೆಯಲ್ಲೇ ನವಜಾತ ಶಿಶುವನ್ನು 3ನೇ ಮಹಡಿಯಿಂದ ಎಸೆದು ಕೊಂದಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹೌರಾದ ಫೋರ್ಶೋರ್ ರಸ್ತೆಯ ಪಕ್ಕದಲ್ಲಿರುವ ಘಾಟ್ ಬಳಿ ಬಿದ್ದಿದ್ದ ಚೀಲದಲ್ಲಿ ಮಗು ರಕ್ತದ ಮಡುವಿನಲ್ಲಿರುವುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ. ಈ ಮಗುವಿಗೆ ಅವಿವಾಹಿತ 15 ವರ್ಷದ ಬಾಲಕಿ ಜನ್ಮ ನೀಡಿದ್ದಾಳೆ ಎನ್ನಲಾಗಿದೆ.
ಹೆರಿಗೆಯ ಸಮಯದಲ್ಲಿ ಅವಿವಾಹಿತ 15 ವರ್ಷದ ಮಗಳೊಂದಿಗೆ ಫ್ಲಾಟ್ನಲ್ಲಿದ್ದ ಮಗುವಿನ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಗು ಸತ್ತೇ ಹುಟ್ಟಿದೆ ಎಂದು ಆರಂಭದಲ್ಲಿ ಹೇಳಿಕೊಂಡ ಮಹಿಳೆ, ಸಾಮಾಜಿಕ ಕಳಂಕದಿಂದ ಪಾರಾಗಲು ಹೀಗೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಈ ಮಧ್ಯೆ ಕೋಲ್ಕತ್ತಾದ ಉದ್ಯಮಿಯಾಗಿರುವ ಮಗುವಿನ ಅಜ್ಜ ಪರಾರಿಯಾಗಿದ್ದಾನೆ.
ಅಪ್ರಾಪ್ತ ಬಾಲಕಿಯ ಗರ್ಭಾವಸ್ಥೆಯ ಬಗ್ಗೆ ಕುಟುಂಬದವರಿಗೆ ತಿಳಿದ ನಂತರ, ಅವರು ಕಳೆದ ವಾರ ಆಕೆಯನ್ನು ಮನೆಗೆ ಕರೆತರುವ ಮೊದಲು ಅವಳನ್ನು ಇಬ್ಬರು ಸಂಬಂಧಿಕರೊಂದಿಗೆ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆರಿಗೆಯ ನಂತರ ಬಾಲಕಿಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಬಾಲಕಿಯನ್ನು ಹೌರಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.