ಕೊಡಗು : ಮದುವೆಯಾಗಿ ಕೇವಲ 7 ತಿಂಗಳ ಕಳೆಯುವ ಅಷ್ಟರಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಮನನೊಂದ ಆಕೆ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ತಣ್ಣೀರುಹಳ್ಳ ನಡೆದಿದೆ.
ನೇಣಿಗೆ ಶರಣಾದ ಗೃಹಿಣಿಯನ್ನು ಸವಿತಾ (22) ಎಂದು ತಿಳಿದುಬಂದಿದೆ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಕಳೆದ ಮೇ ತಿಂಗಳಂದು ಮೈಸೂರು ಜಿಲ್ಲೆಯ ಇಲವಾಲದ ಗುಂಗ್ರಾಲ್ ಛತ್ರ ಗ್ರಾಮದ ಶಶಿಕುಮಾರ್ ಅವರ ಜೊತೆ ಸವಿತಾ ವಿವಾಹ ನೆರವೇರಿತ್ತು.
ಸವಿತಾ ಮೂರು ತಿಂಗಳು ಗರ್ಭಿಣಿಯಾಗಿದ್ದಾಗ, ಪತಿ ಕಿರುಕುಳ ನೀಡುತ್ತಿರುವ ಕುರಿತು ನನಗೆ ಕರೆ ಮಾಡಿ ತಿಳಿಸಿದ್ದಳು. ಬಳಿಕ ಆಕೆಗೆ ಗರ್ಭಪಾತವಾದಾಗ ಮನೆಯಲ್ಲಿಯೆ ಆಕೆಯ ಆರೈಕೆ ಮಾಡುತ್ತಿದ್ದೆವು. ಪತಿಯ ಕಿರುಕುಳಕ್ಕೆ ಮನನೊಂದು ಇದೀಗ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ನಾಗ ಅವರು ಸೋಮವಾರ ಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.