ಪಂಜಾಬ್ : ಸಿಧು ಮೂಸ್ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಅಜರ್ಬೈಜಾನ್ನಲ್ಲಿ ಪತ್ತೆಹಚ್ಚಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಚಿನ್ ಥಾಪನ್ ಬಿಷ್ಣೋಯ್ ಅವರನ್ನು ಪತ್ತೆಹಚ್ಚಲು ಕೇಂದ್ರ ಏಜೆನ್ಸಿಗಳು ರಾಜ್ಯ ಪೊಲೀಸರಿಗೆ ಸಹಾಯ ಮಾಡಿವೆ ಮತ್ತು ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
ಮೂಸ್ವಾಲಾ ಅವರ ಹತ್ಯೆಗೂ ಮುನ್ನ ಸಚಿನ್ ಮತ್ತು ಮತ್ತೊಬ್ಬ ಆರೋಪಿ, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ನಕಲಿ ಪಾಸ್ಪೋರ್ಟ್ಗಳನ್ನು ಬಳಸಿ ದೇಶದಿಂದ ಪರಾರಿಯಾಗಿದ್ದರು.
ಗಾಯಕನ ಕೊಲೆಯ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಮತ್ತೊಬ್ಬ ಸದಸ್ಯ ಗೋಲ್ಡಿ ಬ್ರಾರ್ ಅವರೊಂದಿಗೆ ಸಚಿನ್ ಸಂಪರ್ಕದಲ್ಲಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ.
‘ಆತ ಆರಂಭದಲ್ಲಿ ದುಬೈಗೆ ಪಲಾಯನ ಮಾಡಿದ್ದ. ಭಾರತ ಸರ್ಕಾರ ಮತ್ತು ಕೇಂದ್ರ ಏಜೆನ್ಸಿಗಳ ಬೆಂಬಲದಿಂದ ನಾವು ಅವನನ್ನು ಅಜೆರ್ಬೈಜಾನ್ ನಲ್ಲಿ ಪತ್ತೆಹಚ್ಚಿದ್ದೇವೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುತ್ತದೆ ಎಂಬ ಭರವಸೆ ನಮಗಿದೆ’ ಎಂದು ಯಾದವ್ ಹೇಳಿದರು.
ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿರುವ ಶುಭ್ ದೀಪ್ ಸಿಂಗ್ ಸಿಧು ಅವರನ್ನು ಮೇ 29ರಂದು ಪಂಜಾಬ್ ನ ಮಾನಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.