ಬೆಂಗಳೂರು : ಅತಿ ಹೆಚ್ಚು ಜನಸಂದಣಿ ಹೊಂದಿರುವ ದೇಶದ ನಿಲ್ದಾಣಗಳ ಪೈಕಿ ಒಂದಾದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ಈ ವಿಮಾನ ನಿಲ್ದಾಣದಿಂದ 2025-26ನೇ ಹಣಕಾಸು ವರ್ಷದಲ್ಲಿ 400 ಮಿಲಿಯನ್ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಅದೇ ರೀತಿ, 532,000 ಮೆಟ್ರಿನ್ ಟನ್ ಸರಕುಗಳನ್ನು ಸಾಗಣೆ ಮಾಡಲಾಗಿದೆ ಎಂಬ ಅಂಶ ತಿಳಿದುಬಂದಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ನ 134 ನೇ ಮಂಡಳಿ ಸಭೆಯಲ್ಲಿ, 2025-26 ಹಣಕಾಸು ವರ್ಷದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೈಗೊಂಡ ಪ್ರಮುಖ ಸಾಧನೆಗಳು, ಕಾರ್ಯಕ್ಷಮತೆಯ ಮುಖ್ಯಾಂಶಗಳು ಮತ್ತು ಅಭಿವೃದ್ಧಿ ಉಪಕ್ರಮಗಳ ಪರಿಶೀಲನಾ ಸಭೆಯಲ್ಲಿ ಈ ವಿವರ ನೀಡಲಾಗಿದೆ.
ವಿಮಾನ ನಿಲ್ದಾಣದ ಅಧಿಕೃತ ಹೇಳಿಕೆಯ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಬಿಎಲ್‌ಆರ್ ವಿಮಾನ ನಿಲ್ದಾಣವು 44.47 ಮಿಲಿಯನ್ ಪ್ರಯಾಣಿಕರನ್ನು ಮತ್ತು 532,000 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಿದೆ. ಇದು ಪ್ರಯಾಣಿಕ ಮತ್ತು ಸರಕು ಸಾಗಣೆ ವಿಭಾಗದಲ್ಲಿನ ಪ್ರಾಬಲ್ಯವನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಗಮನಾರ್ಹ ಏರಿಕೆ, ಸ್ಥಿರ ದೇಶೀಯ ಬೇಡಿಕೆ ಮತ್ತು ಸರಕು ಸಾಗಣೆಯಲ್ಲಿ ಹೆಚ್ಚಳವು ಈ ಬೆಳವಣಿಗೆಗೆ ಕಾರಣ ಎಂದು ತಿಳಿಸಲಾಗಿದೆ.








