ಚಿತ್ರದುರ್ಗ: ಸರ್ಕಾರ ತಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ಇಲ್ಲದಿದ್ದರೆ ಸಿಎಂ ಸೇರಿದಂತೆ ಎಲ್ಲ ಮಂತ್ರಿಗಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ( KPCC President DK Shivakumar ) ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಚಳ್ಳಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( Siddaramaiah ) ಅವರು ಕೇವಲ ನಮ್ಮ ಪಕ್ಷದ ನಾಯಕರಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಹಕ್ಕಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಅವರ ಯಾವುದಾದರೂ ಹೇಳಿಕೆ ಸರಿ ಇಲ್ಲ ಎನಿಸಿದ್ದಲ್ಲಿ ಅದನ್ನು ಟೀಕೆ ಮಾಡಬಹುದು. ಅದು ಪ್ರಜಾಪ್ರಭುತ್ವದ ಭಾಗ. ಆದರೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಕಣ್ಣು ತೆರೆಸಲು ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವಾಗ ಈ ರೀತಿ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಹೊಡೆದಿರುವುದು ಸರಿಯಲ್ಲ ಎಂದಿದ್ದಾರೆ.
ಸರ್ಕಾರ ಮಾಡಿದ ಅನೇಕ ತಪ್ಪುಗಳನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತಮಗೆ ಅನ್ಯಾಯ ಆಗಿದೆ ಎಂದು ಪ್ರತಿಭಟಿಸಿದ್ದಾರೆ. ಇದು ಚರ್ಚೆಗೆ ಅವರು ನಮಗೆ ಕೊಟ್ಟಿರುವ ಅಸ್ತ್ರಗಳು. ರಾಜ್ಯದ ಜನ ಸಮಸ್ಯೆಗಳಿಂದ ಪರದಾಡುತ್ತಿರುವಾಗ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ವಿರೋಧ ಪಕ್ಷದ್ದಾಗಿದೆ. ಅದನ್ನು ಮಾಡಲು ಮುಂದಾದರೆ ಕಪ್ಪು ಬಾವುಟ ಹಾರಿಸಿ, ಮೊಟ್ಟೆ ಹೊಡೆಯುತ್ತಿದ್ದಾರೆ. ಈ ರೀತಿ ಸಿದ್ದರಾಮಯ್ಯ ಅವರನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ವಿರೋಧ ಪಕ್ಷದ ನಾಯಕರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಬೊಮ್ಮಾಯಿ ಸಾಹೇಬರೆ, ಕಟೀಲ್ ಸಾಹೇಬರೇ ನಾನು ಯಾವುದೇ ಕರೆ ನೀಡದಿದ್ದರೂ ಅನೇಕ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಅಧಿಕೃತವಾಗಿ ಕರೆ ನೀಡಿ ಮಂತ್ರಿಗಳ ಕಾರ್ಯಕ್ರಮದ ಕಡೆಗಳಲ್ಲಿ ನಿಮ್ಮ ಲಂಚ ಹಾಗೂ 40% ಕಮಿಷನ್ ವಿರೋಧಿಸಿ ಅದೇ ಕಪ್ಪು ಬಾವುಟ ಹಿಡಿದು ಅಡ್ಡಿ ಮಾಡಲು ಹೊರಟರೆ ನಿಮ್ಮ ಕಾನೂನು ವ್ಯವಸ್ಥೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BIGG NEWS : ʻ ಗಾಂಧಿಯನ್ನು ಕೊಂದವರು ನನ್ನನ್ನು ಬಿಡ್ತಾರಾ ʼ : ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ
ನೀವು ಈ ಹಿಂದೆ ನೈತಿಕ ಪೊಲೀಸ್ ಗಿರಿಯಲ್ಲಿ ತಪ್ಪೇನಿದೆ ಎಂದು ಹೇಳಿದ್ದಿರಿ. ಮತ್ತೊಂದು ಕಡೆ ನಾವು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ 30-40 ಪ್ರಕರಣ ದಾಖಲಿಸಿದ್ದೀರಿ. ನಾವು ಅದಕ್ಕೆ ಹೆದರಲಿಲ್ಲ. ಸರ್ಕಾರ ಇದನ್ನು ತಡೆಯದಿದ್ದರೆ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಮುಂದಿನ ಹೋರಾಟದ ಹೆಜ್ಜೆ ಇಡಬೇಕಾಗುತ್ತದೆ ಎಂದಿದ್ದಾರೆ.
ಭಾರತ್ ಜೋಡೋ ಕಾರ್ಯಕ್ರಮ ಸ್ಥಳ ಪರಿಶೀಲನೆಗೆ ಪ್ರವಾಸ
ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಸುಧಾಕರ್ ಅವರ ಅಹ್ವಾನದ ಮೇರೆಗೆ ಹಾಗೂ ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಈ ಮಾರ್ಗದ ಹಾಗೂ ವ್ಯವಸ್ಥೆ ಕಲ್ಪಿಸಲು ಪರಿಶೀಲಿಸಲು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದೇನೆ ಎಂದರು.
ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಸುಮಾರು 510 ಕಿ.ಮೀ. ನಡೆಯಲಿದ್ದು, ಗುಂಡ್ಲುಪೇಟೆಯಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಬಳ್ಳಾರಿ ಮೂಲಕ ರಾಯಚೂರು ಮಾರ್ಗವಾಗಿ ತೆಲಂಗಾಣ ತಲುಪುತ್ತಾರೆ. ಒಟ್ಟು 21 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ರಾಜ್ಯದ ಗಡಿ ಪ್ರವೇಶಿಸುವಾಗ ಅರಣ್ಯ ಪ್ರದೇಶವಿದ್ದು, ಈ ಭಾಗದಲ್ಲಿ ಮಾಡುವುದು ಬೇಡ ಎಂದು ಕೇರಳ ಪೊಲೀಸರು ಮನವಿ ಮಾಡಿದ್ದಾರೆ. ಅದೇ ರೀತಿ ರಾಜ್ಯದ ಭಾಗದಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ತೆಲಂಗಾಣ ಸಿಎಂ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಕಿಡಿ
ಇದೆಲ್ಲದರ ಪರಿಶೀಲನೆಗೆ ದೆಹಲಿಯಿಂದ ಒಂದು ತಂಡ ಆಗಮಿಸುತ್ತಿದ್ದು, ಅವರು ಬರುವ ಮುನ್ನ ನಾನು ಕಣ್ಣಾರೆ ಸ್ಥಳ ಪರಿಸ್ಥಿತಿ ಪರಿಶೀಲಿಸುತ್ತಿದ್ದೇನೆ. ಈ ಭಾಗದಲ್ಲಿ ನಾನು ಪಾದಯಾತ್ರೆ ಮಾಡಿದ್ದು, ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ಇದು ಪಕ್ಷದ ವಿಚಾರ ಅಷ್ಟೇ ಅಲ್ಲ. ದೇಶ ವಿಭಜನೆ ಆಗುತ್ತಿರುವ ಸಮಯದಲ್ಲಿ ದೇಶವನ್ನು ಒಗ್ಗೂಡಿಸುವ ಸಲುವಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ನಮ್ಮ ರಾಜ್ಯದ ಒಂದೊಂದು ಜಿಲ್ಲೆಯವರು ಒಂದೊಂದು ದಿನ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.
ಮೊಟ್ಟೆ ಹೊಡೆದಿರುವವರು ಕಾಂಗ್ರೆಸ್ ಕಾರ್ಯಕರ್ತರು ಎಂಬ ಬೋಪಯ್ಯ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮೊದಲು ಬೊಪಯ್ಯ ಅವರನ್ನು ಬಂಧಿಸಬೇಕು. ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ. ನಾವು ಮಾಡಿದ ಕೆಲಸವನ್ನು ನಮ್ಮ ಕೆಲಸ ಎಂದು ಹೇಳಿಕೊಳ್ಳಬೇಕು. ತಾವು ಮಾಡಿದ ಕೆಲವನ್ನು ಬೇರೆಯವರ ಮೇಲೆ ಹಾಕುವುದು ಹೇಡಿತನ. ಸರಕಾರ ಎಲ್ಲ ವಿಚಾರಗಳಲ್ಲೂ ವಿಫಲವಾಗಿದ್ದು, ಅವರ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನಾನು ಪಕ್ಷದ ಅಧ್ಯಕ್ಷನಾಗಿ ಮುಖ್ಯಮಂತ್ರಿಗಳಿಗೆ ನಮ್ಮ ನೋವು, ಭಾವನೆಯನ್ನು ತಿಳಿಸುತ್ತಿದ್ದೇನೆ. ಬೇರೆಯವರ ಹೇಳಿಕೆಗೆ ಉತ್ತರ ನೀಡುವುದಿಲ್ಲ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ವಿರೋಧವಿದ್ದರೂ ಕೊಡಗಿಗೆ ಹೋಗಿದ್ದೇಕೆ ಎಂಬ ಪ್ರಶ್ನೆಗೆ, ‘ಅದೇನು ವಿರೋಧ ವ್ಯಕ್ತಪಡಿಸುವವರ ಮನೆಯೇ?’ ಎಂದು ಪ್ರಶ್ನಿಸಿದರು.
2010 ರಿಂದ 2018 ರವರೆಗೆ ಇಂಧನ ಇಲಾಖೆಯಲ್ಲಿ ಸಾಕಷ್ಟು ಒಳಒಪ್ಪಂದಗಳು ಆಗಿದ್ದು ತನಿಖೆ ಮಾಡುತ್ತೇವೆ ಎಂಬ ಸರ್ಕಾರದ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ತಡ ಮಾಡದೇ ತನಿಖೆ ಮಾಡಿಸಲಿ. ಕೇವಲ ಬಾಯಿ ಮಾತಿಗೆ ಹೇಳಿ ಸುಮ್ಮನಾಗಬಾರದು. ಸಿಬಿಐ, ಇಡಿ ಅಥವಾ ಅವರೇ ಮಾಡಲಿ. ಆದಷ್ಟು ಬೇಗ ತನಿಖೆ ಮಾಡಿಸಲಿ’ ಎಂದು ತಿಳಿಸಿದರು.