ಬೆಂಗಳೂರು: ರಾಜ್ಯದ ಹಲವು ಕಡೆ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗುವ ಮೂಲಕ ಚಳಿ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಹವಾಮಾನ ತಜ್ಞ ಡಾ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಹವಾಮಾನ ಬದಲಾವಣೆ ವರದಿ ಪ್ರಕಾರ, ಇಂದಿನಿಂದ (ಗುರುವಾರ) ಎರಡು ದಿನ ಬೆಳಗ್ಗೆ ದಟ್ಟವಾದ ಮಂಜು ಕವಿದ ಪರಿಸರ ಹಾಗೂ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಬಾದಾಮಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 10ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಈ ಪ್ರದೇಶದ ನಿರೀಕ್ಷಿತ ವಾಡಿಕೆ ಕನಿಷ್ಠ ತಾಪಮಾನಕ್ಕಿಂತ ಶೇ.8ರಷ್ಟು ಕಡಿಮೆ ಉಷ್ಣಾಂಶವಾಗಿದೆ.
ಬೆಳಗಾವಿಯಲ್ಲಿ ಕನಿಷ್ಠ 12.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ (ಶೇ.-4), ಚಿತ್ರದುರ್ಗ ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್ (ಶೇ.- 4), ರಾಯಚೂರು ಕನಿಷ್ಠ 15.4ಡಿಗ್ರಿ ಸೆಲ್ಸಿಯಸ್ ತಾಪಮಾನ (-4), ಹಂಪಿ 14.4ಡಿಗ್ರಿ ಗದಗಿನಲ್ಲಿ ಕನಿಷ್ಠ ತಾಪಮಾನ 11.6 ಡಿಗ್ರಿ ಸೆಲ್ಸಿಯಸ್ (ಶೇ.-7ಕಡಿಮೆ) ದಾಖಲಾಗಿದೆ. ಈ ಮೂಲಕ ನವೆಂಬರ್ 17ರಂದು ಅತ್ಯಧಿಕ ಚಳಿ ಹಾಗೂ ಮಂಜಿನ ವಾತಾವರಣ ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಹೊನ್ನಾವರ ಹಾಗೂ ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಾಮಾನ (34.5ಡಿ.ಸೆ) ದಾಖಲಾಗಿದೆ.
ಇನ್ನೂ, ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಗುರುವಾರ ಬೆಳಗ್ಗೆ ದಟ್ಟ ಮಂಜು ಕಂಡು ಬಂದಿದ್ದು, ಎಲ್ಲೆಡೆ ಚಳಿ ಪ್ರಮಾಣ ಹೆಚ್ಚಾಗಿದೆ. ಇದು ಶುಕ್ರವಾರವು ಮುಂದುವರಿಯುವ ಮುನ್ಸೂಚನೆ ಇದೆ.ಮುಖ್ಯವಾಗಿ ಶುಕ್ರವಾರ ಒಂದು ದಿನ ಚಳಿ ಪ್ರಮಾಣದಲ್ಲಿ ಇನ್ನಷ್ಟು ಏರಿಕೆ ಆಗಲಿದೆ. ಗುರುವಾರ ಬೆಳಗ್ಗೆ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಶುಕ್ರವಾರ ಮತ್ತಷ್ಟು ಕಡಿಮೆ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ಶನಿವಾರ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಬಿಡದಿ, ಬೊಮ್ಮನಹಳ್ಳಿ ಸೇರಿದಂತೆ ಇಡಿ ಬೆಂಗಳೂರಿನಾದ್ಯಂತ ದಟ್ಟ ಮಂಜು ಆವರಿಸಿದೆ. ಎದುರಿನ ವ್ಯಕ್ತಿಗಳು, ವಾಹನ, ಕಟ್ಟಡಗಳು ಕಾಣದಷ್ಟು ಮಂಜು ಕವಿದಿದೆ. ಮುಂದಿನ 48ಗಂಟೆ ನಂತರ ವಾತಾವರಣದಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ. ಆಗ ಮತ್ತೆ ಮಳೆ ಸುರಿದರೆ ಪುನಃ ಮಳೆ ಇಳಿಕೆ ಬೆನ್ನಲ್ಲೆ ಇದೇ ರೀತಿ ಚಳಿ, ಮಂಜು ಆವರಿಸುವ ನಿರೀಕ್ಷೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.