ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹೈಕಮಾಂಡ್ ಮಟ್ಟದ ಸಂಚಲನ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ನವದೆಹಲಿಯಿಂದ ತುರ್ತು ಕರೆ ಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ತಡರಾತ್ರಿಯೇ ರಾಷ್ಟ್ರ ರಾಜಧಾನಿಗೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಲಿದ್ದಾರೆ.
ಮೂಲಗಳ ಪ್ರಕಾರ, ಈ ದಿಢೀರ್ ದೆಹಲಿ ಭೇಟಿಯ ಹಿಂದೆ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಒಂದು ರಹಸ್ಯ ಸಭೆಯ ದೊಡ್ಡ ತಂತ್ರಗಾರಿಕೆಯೂ ಅಡಗಿದೆ ಎನ್ನಲಾಗುತ್ತಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯ ರಹಸ್ಯ ಸಭೆ ಮತ್ತು ಆಪ್ತರ ಒಮ್ಮತದ ನಿರ್ಧಾರ
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಸ್ಥಳವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅತ್ಯಂತ ಆಪ್ತ ಸಚಿವರು ಮತ್ತು ನಾಯಕರೊಂದಿಗೆ ಸುದೀರ್ಘವಾದ ಸದ್ದಿಲ್ಲದ ಸಭೆ ನಡೆಸಿದ್ದರು. ಆ ರಹಸ್ಯ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಾರಿಕೆ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳ ಬಗ್ಗೆ ಆಪ್ತ ವಲಯದೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದರು.
ಒಂದು ವೇಳೆ ಹೈಕಮಾಂಡ್ನಿಂದ ನವದೆಹಲಿಗೆ ಬುಲಾವ್ ಬಂದರೆ, ಯಾರೂ ಬಿಡಿಯಾಗಿ ಹೋಗದೆ ಎಲ್ಲರೂ ಒಟ್ಟಾಗಿಯೇ ದೆಹಲಿಗೆ ತೆರಳಿ ತಮ್ಮ ನಿಲುವನ್ನು ಗಟ್ಟಿಯಾಗಿ ಮಂಡಿಸಬೇಕು ಎಂದು ಅಂದಿನ ಸಭೆಯಲ್ಲೇ ಆಪ್ತರು ಒಮ್ಮತದ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ. ಪೂರ್ವ ನಿಯೋಜಿತ ಪ್ಲಾನ್ ಪ್ರಕಾರವೇ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ದೆಹಲಿಯತ್ತ ಮುಖ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ಗೆ ಕೆ.ಸಿ ವೇಣುಗೋಪಾಲ್ ಕರೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆಗಳು ಬಿರುಸುಗೊಂಡ ಬೆನ್ನಲ್ಲೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿದ್ದಾರೆ. ಹೈಕಮಾಂಡ್ನಿಂದ ಈ ಸ್ಪಷ್ಟ ಸೂಚನೆ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆಗಿರುವ ಡಿಕೆಶಿ, ಇಂದು ತಡರಾತ್ರಿಯೇ ದೆಹಲಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೊರಟ ಬೆನ್ನಲ್ಲೇ ಡಿಸಿಎಂ ಅವರಿಗೂ ಕರೆ ಬಂದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಪ್ರತ್ಯೇಕ ಭೇಟಿ; ಹೈಕಮಾಂಡ್ ಅಂಗಳದಲ್ಲಿ ಕರ್ನಾಟಕ ರಾಜಕೀಯ
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಯಿಸಿಕೊಳ್ಳಲಾಗಿದ್ದರೂ, ಇಬ್ಬರೂ ಪ್ರತ್ಯೇಕವಾಗಿಯೇ ತೆರಳುತ್ತಿರುವುದು ವಿಶೇಷ. ಕಾಂಗ್ರೆಸ್ ಹೈಕಮಾಂಡ್ ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ರಾಜ್ಯದ ಮೂರು ವರ್ಷಗಳ ಆಡಳಿತಾವಧಿಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಹಾದಿ ಮತ್ತು ಅಧಿಕಾರ ಹಂಚಿಕೆಯ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯ ಸಭೆಯ ನಿರ್ಧಾರದಂತೆ ಸಿಎಂ ಸಿದ್ದರಾಮಯ್ಯ ಬಣದ ಆಪ್ತರು ಕೂಡ ದೆಹಲಿಯಲ್ಲಿ ಬೀಡು ಬಿಡುವ ಸಾಧ್ಯತೆಗಳಿದ್ದು, ಹೈಕಮಾಂಡ್ ನಾಯಕರ ಭೇಟಿಯ ನಂತರ ಕರ್ನಾಟಕ ರಾಜಕೀಯದಲ್ಲಿ ಯಾವ ಮಹತ್ವದ ತಿರುವು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯಾದ್ಯಂತ 995 ಕೆರೆಗಳ ಪುನಶ್ಚೇತನ: ಸಾಗರದ ಉಳ್ಳೂರಿನಲ್ಲಿ ಕೆರೆ ಸಮಿತಿ ರಚನೆ ಧರ್ಮಸ್ಥಳ ಯೋಜನೆ ಯಶಸ್ಸು








