ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಬಂಡಾಯ ಶಾಸಕ ಎಸ್.ಟಿ. ಸೋಮಶೇಖರ್ ಬಹಿರಂಗಪಡಿಸಿದ್ದಾರೆ. ಮತ್ತೊಂದೆಡೆ ಯಲ್ಲಾಪುರ ಕ್ಷೇತ್ರದ ಮತ್ತೊಬ್ಬ ಬಿಜೆಪಿ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ತಾವು “ಆತ್ಮಸಾಕ್ಷಿ ಮತ” ಚಲಾಯಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, “ನಾನು ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೇ ಮತ ಚಲಾಯಿಸಿದ್ದೇನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲ: ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಸೋಮಶೇಖರ್, “ಬಿಜೆಪಿ ಅಥವಾ ಜೆಡಿಎಸ್ ನಾಯಕರು ಯಾರೂ ನನ್ನನ್ನು ಮತ ಕೇಳಲು ಸಂಪರ್ಕ ಮಾಡಿರಲಿಲ್ಲ. ಸಂಪರ್ಕಿಸದೇ ಇದ್ದಾಗ ಮತ ಹಾಕುವುದು ಹೇಗೆ? ಯಾರು ಮನವಿ ಮಾಡುತ್ತಾರೋ ಅವರಿಗೆ ಮತ ಹಾಕಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಕರೆ ಮಾಡಿ ಮತ ನೀಡುವಂತೆ ಕೋರಿದ್ದರು. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರೆ ಮತ ಹಾಕುವುದಾಗಿ ನಾನು ಅವರಿಗೆ ತಿಳಿಸಿದ್ದೆ. ಅದಕ್ಕೆ ಅವರು ಹಂತ-ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕೇವಲ ನನ್ನ ಕ್ಷೇತ್ರದ ಅನುದಾನ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದಷ್ಟೇ ನಾನು ಕಾಂಗ್ರೆಸ್ ಜೊತೆಗಿದ್ದೇನೆ,” ಎಂದರು.
ನಾನೂ ಆತ್ಮಸಾಕ್ಷಿ ಮತ ಹಾಕಿದ್ದೇನೆ: ಶಿವರಾಮ್ ಹೆಬ್ಬಾರ್ ಇದೇ ವೇಳೆ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, “ಬಿಜೆಪಿ ಹಾಗೂ ಜೆಡಿಎಸ್‌ನವರು ಯಾರೂ ನನ್ನ ಬಳಿ ಬಂದು ಮತ ಕೇಳಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮತ್ತು ಸ್ವತಃ ಮುಖ್ಯಮಂತ್ರಿಗಳು ಕರೆ ಮಾಡಿ ಮತ ಕೇಳಿದ್ದರು. ಕ್ಷೇತ್ರದ ಅಭಿವೃದ್ಧಿ ಕುರಿತು ನನಗೂ ಭರವಸೆ ನೀಡಿದ್ದಾರೆ. ಹಾಗಂತ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ ಎಂದು ಎಲ್ಲಿಯೂ ಹೇಳುತ್ತಿಲ್ಲ, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ,” ಎಂದು ತಿಳಿಸಿದರು.
ಬಿಜೆಪಿಯ ಇಬ್ಬರು ಪ್ರಮುಖ ಶಾಸಕರು ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿರುವುದು ಹಾಗೂ ಬಹಿರಂಗವಾಗಿ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.








