ಕಲಬುರ್ಗಿ : ಕಲಬುರ್ಗಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್, ಮಾಜಿ ಗ್ರಾ.ಪಂ ಸದಸ್ಯನ ಕೊಲೆ ಆರೋಪಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಆಳಂದ ತಾಲೂಕಿನ ಖಾನಾಪುರದ ಕ್ರಾಸ್ ಬಳಿ ನಡೆದಿದ್ದ ವಿಶ್ವನಾಥ್ ಜಮಾದಾರ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಮೇಲೆ ಶನಿವಾರ ಮಾಡ್ಯಾಳ ಗ್ರಾಮದ ಬಳಿಯಲ್ಲಿ ಬೆಳಗ್ಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.
ಹೌದು ಸೆ.13ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮಾದಾರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣ ಪೂಜಾರಿಯು ತಾನು ಬಚ್ಚಿಟ್ಟಿದ್ದ ಗನ್ ವಶಕ್ಕೆ ಪಡೆಯಲು ಪೊಲೀಸರು ತೆರಳಿದಾಗ ನಿಂಬರ್ಗಾ ಮಹಿಳಾ ಪಿಎಸ್‌ಐ ಮೇಲೆ ಲಕ್ಷ್ಮಣ ಹಲ್ಲೆ ಮಾಡಿದ್ದಾನೆ. ಇದರಿಂದ ಪಿಎಸ್‌ಐ ಕೈಗೆ ಗಾಯವಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸೋಮಲಿಂಗ ಒಡೆಯರ್ ಲಕ್ಷ್ಮಣ ಕಾಲಿಗೆ ಗುಂಡು ಹಾರಿಸಿದ್ದಾರೆ.
ಕೂಡಲೇ ಸ್ಥಳದಲ್ಲಿ ಕುಸಿದು ಬಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಕ್ಷ್ಮಣ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಕಲಬುರಗಿಯಲ್ಲಿ ಗನ್ ಸಪ್ಲೈ ಮಾಡಿಕೊಂಡಿದ್ದ ಈತ ಸೆಕ್ಷನ್ 307 ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ಪೊಲೀಸರಿಗೂ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.