ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಜಾತ್ಯತೀತ ಜನತಾದಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಗರದ ಪ್ರೀಢಂ ಪಾರ್ಕ್ʼನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅವರಿಬ್ಬರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ; ಡಿಕೆಶಿ ಮತ್ತು ಶಿವರಾಮೇಗೌಡ ವಿರುದ್ಧ ಕೂಡಲೇ ಎಸ್ ಐಟಿ ಕೇಸ್ ದಾಖಲಿಸಿ ವಿಚಾರಣೆ ನಡೆಸಬೇಕು, ಉಪ ಮುಖ್ಯಮಂತ್ರಿ ಹುದ್ದೆಯಿಂದ ಡಿಕೆಶಿಯನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡರು; ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡನಾಡಿನ ಏಕೈಕ ಮಾಜಿ ಪ್ರಧಾನಿಗಳಾದ ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೋಲಿನ ಭಯದಿಂದ ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ, ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅವರನ್ನು ಮುಖ್ಯಮಂತ್ರಿಗಳು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜವಾಬ್ದಾರಿಯುತ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಅದರ ಮಹತ್ವ ಅರಿಯದೇ ಅವರು ಅಶ್ಲೀಲ ಪೆನ್ ಡ್ರೈವ್ ಗಳ ಹಂಚಿಕೆಯಲ್ಲಿ ಶಾಮೀಲಾಗಿದ್ದಾರೆ. ಶಿವರಾಮೇಗೌಡ, ದೇವರಾಜೇಗೌಡ ನಡುವಿನ ಮೊಬೈಲ್ ಸಂಭಾಷಣೆ ಇದನ್ನು ಬಹಿರಂಗ ಮಾಡಿದೆ. ಕೂಡಲೇ ತನಿಖಾ ತಂಡ ಇವರಿಬ್ಬರಿಗೂ ಸಮನ್ಸ್ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ಉದಯ್ ವಿರುದ್ಧ ಆಕ್ರೋಶ
ಈ ರಾಜ್ಯಕ್ಕೆ ಎರಡು ಸಲ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಬಗ್ಗೆ ಕಾಂಗ್ರೆಸ್ ಶಾಸಕನೊಬ್ಬ ಲಘುವಾಗಿ ಮಾತನಾಡಿದ್ದಾರೆ. ಲಾಟರಿ, ಸಾರಾಯಿ ನಿಷೇಧ ಮಾಡಿ, ಸಾಲ ಮನ್ನಾ ಮೂಲಕ ಬಡಜನರ ಬದುಕಿಗೆ ರಕ್ಷಣೆ ಕೊಟ್ಟವರು ಕುಮಾರಸ್ವಾಮಿ ಅವರು. ಅಂಥವರ ಬಗ್ಗೆ ಲಾಟರಿ ದಂಧೆ ನಡೆಸುವ, ಲಾಟರಿ ಕಿಂಗ್ ಪಿನ್ ಆತ. ಇದೇ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ದೇಶ ಬಿಟ್ಟು ಓಡಿ ಹೋಗಿದ್ದ. ಆತ ಮದ್ದೂರು ಶಾಸಕ, ಆತನ ಹೆಸರು ಹೇಳುವುದಕ್ಕೂ ನನಗೆ ಅಸಹ್ಯವಾಗುತ್ತಿದೆ. ಆತ ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಾನೆ ಎಂದು ಮದ್ದೂರು ಶಾಸಕ ಉದಯ್ ವಿರುದ್ಧ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರ ಎಂದರೆ ರಾಜ್ಯದಲ್ಲಿಯೇ ವಿಶೇಷ ಗೌರವ ಅಭಿಮಾನ ಇದೆ. ಅನೇಕ ದಿಗ್ಗಜರು ಅಲ್ಲಿಂದ ಗೆದ್ದು ವಿಧಾನಸಭೆಗೆ ಬಂದಿದ್ದರು. ಅಂಥ ಮದ್ದೂರು ಕ್ಷೇತ್ರದಿಂದ ಒಬ್ಬ ಲಾಟರಿ ದಂಧೆಕೋರ, ಇಸ್ಪೀಟ್ ಜೂಜುಕೋರ ಶಾಸಕ ಆಗಿದ್ದಾನೆ. ಬೆಂಗಳೂರಿನಲ್ಲಿ ಎಷ್ಟು ಇಸ್ಪೀಟ್ ಅಡ್ಡಾಗಳಿವೆ, ಅವಕ್ಕೆಲ್ಲಾ ಈತನೇ ಉಸ್ತುವಾರಿ ಸಚಿವ ಎಂದು ಅವರು ಕಿಡಿಕಾರಿದರು.
ಪಕ್ಷದ ಹಿರಿಯ ಮುಖಂಡರಾದ ಜವರಾಯಿ ಗೌಡರು, ನಗರ ಘಟಕದ ಕಾರ್ಯಾಧ್ಯಕ್ಷರಾದ ರೇವಣ್ಣ, ನಗರ ಯುವ ಜನತಾದಳ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ತಿಮ್ಮೇಗೌಡ, ಅಂದಾನಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾವ್, ಕನ್ಯಾಕುಮಾರಿ, ಮಂಗಳಾ, ಗೋಪಾಲ್ ಸೇರಿದಂತೆ ಪಕ್ಷದ ಅನೇಕು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
BIG NEWS: ಇನ್ಮುಂದೆ ‘ಹೊರಗುತ್ತಿಗೆ ನೇಮಕಾತಿ’ಯಲ್ಲೂ ‘ಮೀಸಲಾತಿ’ ಕಡ್ಡಾಯ: ‘ರಾಜ್ಯ ಸರ್ಕಾರ’ ಆದೇಶ
ನಾಳೆ ಮಧ್ಯಾಹ್ನ 3 ಗಂಟೆಗೆ ‘ದ್ವಿತೀಯ ಪಿಯುಸಿ ಪರೀಕ್ಷೆ-2’ರ ಫಲಿತಾಂಶ ಪ್ರಕಟ: ಇಲ್ಲಿದೆ ‘ಡೈರೆಕ್ಟ್ ಲಿಂಕ್’