ಬೆಳಗಾವಿ: ರಾಜ್ಯದಲ್ಲಿ ಬೇರೆ ಕಡೆ ಪಂಚಮಸಾಲಿ ಸಮಾವೇಶ ಮಾಡೋದು ಸುಲಭ, ಆದ್ರೇ ಗೋಕಾಕ್ ನಲ್ಲಿ ಪಂಚಮಸಾಲಿ ಸಮಾವೇಶ ಮಾಡೋದಕ್ಕೆ ಎಂಟೆದೆ ಬೇಕು ಎಂಬುದಾಗಿ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇಂದು ಗೋಕಾಕ್ ನಗರದಲ್ಲಿ ನಡೆದಂತ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಈಗಾಗಲೇ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಬೆಂಗಳೂರಿನಲ್ಲಿ ಹತ್ತು ಲಕ್ಷ ಜನ ಸೇರಿಸಿ ಸಮಾವೇಶ ಮಾಡಿದರು ಪಂಚಮಸಾಲಿ ಸಮುದಾಯದ ಮೀಸಲಾತಿ ಕೂಗು ಕೇಳಿಸುತ್ತಿಲ್ಲ. ಈ ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಆರು ತಿಂಗಳಲ್ಲಿ ಮೀಸಲಾತಿ ಕೊಡುವುದಾಗಿ ಹೇಳಿದ್ದರು, ಬಳಿಕ ಅವರೇ ಸಿಎಂ ಸ್ಥಾನದಿಂದ ಕೆಳಗಿಳಿದರು. ಬೊಮ್ಮಾಯಿ ಮೂರು ತಿಂಗಳ ಕಾಲಾವಕಾಶ ಕೇಳಿ ಮಾತು ತಪ್ಪಿದ್ದಾರೆ ಎಂದು ಗುಡುಗಿದರು.
ಸರ್ಕಾರದ ವಿಳಂಬ ನೀತಿಯಿಂದ ಪಂಚಮಸಾಲಿ ಸಮುದಾಯದವರಿಗೆ ನೋವಾಗಿದೆ. ಬೆಂಗಳೂರಿನಲ್ಲಿ ಬೃಹತ್ ಪಂಚಮಸಾಲಿ ವಿರಾಟ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ. ಡಿಸೆಂಬರ್ 12ರಂದು ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂಬುದಾಗಿ ಹೇಳಿದರು.