ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಹೆಸರಿನಲ್ಲಿರುವ ಹೈದರಾಬಾದ್‌ನ ಶ್ರೀನಗರ ಕಾಲೋನಿಯಲ್ಲಿನ ನಿವಾಸವನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳು ಸೀಜ್ ಮಾಡಿದ್ದಾರೆ. ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಯಲಲಿತಾ ಅವರಿಗೆ ಸೇರಿದ ಈ ಐಷಾರಾಮಿ ಬಂಗಲೆಗೆ ಸಂಬಂಧಿಸಿದಂತೆ ಸುಮಾರು 8 ಲಕ್ಷ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಇತ್ತು ಎನ್ನಲಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆಗೆ ಬೀಗ ಮುದ್ರೆ ಹಾಕಿದ್ದಾರೆ.
ಜಿಹೆಚ್‌ಎಂಸಿ ಕಂದಾಯ ವಿಭಾಗದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಮನೆಯ ಮುಖ್ಯ ದ್ವಾರಕ್ಕೆ ನೋಟಿಸ್ ಅಂಟಿಸಿ ಸೀಜ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.ಜಯಲಲಿತಾ ಅವರ ನಿಧನದ ನಂತರ ಅವರ ಆಸ್ತಿಗಳ ನಿರ್ವಹಣೆ ಮತ್ತು ವಾರಸುದಾರರ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರಸ್ತುತ ಈ ಮನೆಯಲ್ಲಿ ಯಾರೂ ವಾಸವಿರಲಿಲ್ಲ ಮತ್ತು ತೆರಿಗೆ ಪಾವತಿಸಲು ಯಾರೂ ಮುಂದೆ ಬಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಿಗದಿತ ಸಮಯದೊಳಗೆ ಬಾಕಿ ಇರುವ ತೆರಿಗೆ ಮೊತ್ತವನ್ನು ಪಾವತಿಸದಿದ್ದರೆ, ನಿಯಮಾನುಸಾರ ಆಸ್ತಿಯನ್ನು ಹರಾಜು ಹಾಕುವ ಮೂಲಕ ಬಾಕಿಯನ್ನು ವಸೂಲಿ ಮಾಡಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.








