ಢಾಕಾ: ಬಾಂಗ್ಲಾದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಭವ್ಯ ಶ್ರೀರಾಮನ ಮೂರ್ತಿಯನ್ನು ಕೆಲವು ಕಟುಕಪಂಥೀಯರು ವಿರೂಪಗೊಳಿಸಿ, ಅಪಚಾರ ಎಸಗಿರುವುದನ್ನು ಖಂಡಿಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯವು ರಾಜಧಾನಿ ಢಾಕಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದಾರೆ.
ಬಾಂಗ್ಲಾದೇಶದ ಉತ್ತರ ಭಾಗದ ಗಾಯ್‌ಬಾಂಧಾ ಜಿಲ್ಲೆಯ ಪಲಾಶ್ ಬಾರಿ ಎಂಬಲ್ಲಿನ ಶ್ರೀ ಶ್ರೀ ರಾಧಾ ಗೋವಿಂದ ಮಂದಿರದ ಆವರಣದಲ್ಲಿ ಸುಮಾರು 81 ಅಡಿ ಎತ್ತರದ ಭವ್ಯ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಲಾಗುತ್ತಿತ್ತು. ಈಗಾಗಲೇ ಶೇಕಡಾ 80 ರಷ್ಟು ಕಾಮಗಾರಿ ಮುಕ್ತಾಯಗೊಂಡಿತ್ತು. ಆದರೆ, ಇತ್ತೀಚೆಗೆ ಕೆಲವು ಇಸ್ಲಾಮಿಕ್ ಕಟ್ಟರಪಂಥೀಯ ಗುಂಪುಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಮೂರ್ತಿಗೆ ಪಾದರಕ್ಷೆಗಳನ್ನು ಹಾಕಿ ಅಪಚಾರ ಎಸಗಿದ್ದವು. ಅಲ್ಲದೆ ಮಂದಿರ ಸಮಿತಿಗೆ ಬುಲ್ಡೋಜರ್ ಮೂಲಕ ಮೂರ್ತಿಯನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಭದ್ರತೆಯ ದೃಷ್ಟಿಯಿಂದ ಮಂದಿರದ ನಿರ್ಮಾಣ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಘಟನೆ ನಡೆದು ದಿನಗಳಾಗಿದ್ದರೂ ತಾರಿಕ್ ರೆಹಮಾನ್ ನೇತೃತ್ವದ ಮಧ್ಯಂತರ ಸರ್ಕಾರವಾಗಲಿ ಅಥವಾ ಅಲ್ಲಿನ ಪೊಲೀಸರಾಗಲಿ ಯಾರೊಬ್ಬರನ್ನೂ ಬಂಧಿಸದ ಕಾರಣ ಹಿಂದೂ ಸಮುದಾಯ ತೀವ್ರ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಹಿಂದೂ ಮಹಾಜೋತ್’ ಸಂಘಟನೆ ಮತ್ತು ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಢಾಕಾದ ಪ್ರಮುಖ ಶಹಬಾಗ್ ಜಂಕ್ಷನ್‌ನಲ್ಲಿ ಒಟ್ಟುಗೂಡಿ ನ್ಯಾಷನಲ್ ಪ್ರೆಸ್ ಕ್ಲಬ್‌ವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಸಿದರು. ಪ್ರೆಸ್ ಕ್ಲಬ್ ಎದುರು ಬೃಹತ್ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಲಾಯಿತು. ರಂಗ್‌ಪುರದಲ್ಲೂ ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಣ್ಣ ಮಟ್ಟದ ನೂಕಾಟ-ತಳ್ಳಾಟ ನಡೆದಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಮಧ್ಯಂತರ ಸರ್ಕಾರಕ್ಕೆ 72 ಗಂಟೆಗಳ ಕಾಲಾವಕಾಶ (ಉಲ್ಟಿಮೇಟಂ) ನೀಡಿದ್ದಾರೆ. “ಮುಂದಿನ 72 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ, ಭಾನುವಾರ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಬೃಹತ್ ಮನವಿ ಪತ್ರ ಸಲ್ಲಿಸಿ ದೇಶಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ. “ಕಿಡಿಗೇಡಿಗಳು ಒಂದು ಕಡೆ ಮಂದಿರದ ಕೆಲಸ ನಿಲ್ಲಿಸಿದರೆ, ನಾವು ಬಾಂಗ್ಲಾದೇಶದ ಎಲ್ಲಾ 64 ಜಿಲ್ಲೆಗಳಲ್ಲೂ ಒಂದೊಂದಾಗಿ ರಾಮ ಮಂದಿರಗಳನ್ನು ನಿರ್ಮಿಸುತ್ತೇವೆ” ಎಂದು ಹಿಂದೂ ಮಹಾಜೋತ್ ಸಂಘಟನೆ ಇದೇ ವೇಳೆ ಸವಾಲು ಹಾಕಿದೆ.
ರಾಷ್ಟ್ರೀಯ ಪೂಜಾ ಆಚರಣಾ ಸಮಿತಿಯು ಈ ಘಟನೆಯನ್ನು ಖಂಡಿಸಿ ಶನಿವಾರ ದೇಶಾದ್ಯಂತ ವ್ಯಾಪಕ ಚಳುವಳಿಗೆ ಕರೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು ಜಾಗತಿಕ ಮಟ್ಟದಲ್ಲೂ ತೀವ್ರ ಆತಂಕಕ್ಕೆ ಕಾರಣವಾಗಿದೆ.








