ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಾಣ ಆಗುತ್ತಿರುವ ಎಕ್ಸ್ ಪ್ರೆಸ್ ಹೈವೇ ಯೋಜನೆಯಲ್ಲಿ ಕೈಗೊಂಡಿರುವ ಅವೈಜಾನಿಕ ಕಾಮಗಾರಿಗಳಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅಲ್ಲಿದೆ, ಎಕ್ಸ್ ಪ್ರೆಸ್ ಹೈವೇ ಹಾಗೂ ಪ್ರವಾಹದ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಇಂದು ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಹುಣಸನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲು ಒತ್ತುವರಿಯಾದ ನಾಲೆ, ಕಾಲುವೆ ತೆರವು ಮಾಡಲಿ ಎಂಬ ಪ್ರತಾಪ್ ಸಿಂಹ ಟ್ವೀಟ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು, ಮುಖ್ಯಮಂತ್ರಿ ಅವರು ಕೂಡ ಬೆಂಗಳೂರು ನಗರದ ವಿವಿಧ ಕಡೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಸಹ ಮನೆಗಳಲ್ಲಿ ನೀರು ನಿಂತಿದೆ. ಯಾಕೆ ಎನ್ನುವುದನ್ನು ಪ್ರತಾಪ್ ಸಿಂಹ ಅರ್ಥ ಮಾಡಿಕೊಳ್ಳಬೇಕು. ಇದು ಈಗ ಆಗಿರುವ ತೊಂದರೆ ಅಲ್ಲ . ರಾಜಕೀಯ ಸ್ವೇಚ್ಛಾಚಾರದಿಂದ ಆಗಿರುವ ಅನಾಹುತಗಳಿವು. ಈ ಹಿಂದಿನ ಸರ್ಕಾರಗಳಲ್ಲಿ ಆಗಿರುವ ತಪ್ಪು ತೀರ್ಮಾನಗಳಿವು. ಕುಮಾರಸ್ವಾಮಿ ಮಾಡಿರುವ ನಿರ್ಧಾರಗಳಲ್ಲ ಇವು ಎಂದು ಟೀಕಾ ಪ್ರಹಾರ ನಡೆಸಿದರು.
ರಸ್ತೆಗಳಲ್ಲಿ ನೀರು ನಿಂತಿದೆಯಲ್ಲ, ಅದಕ್ಕೆ ಕಾರಣ ಯಾರು? ಅಕ್ರಮವಾಗಿ ನಿರ್ಮಾಣ ಆಗಿರುವುದನ್ನು ನಾವು ತೆರವು ಮಾಡಿಸುತ್ತೇವೆ. ಅದು ಒಂದು ಭಾಗ. ಆದರೆ, ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪ್ರಾರಂಭ ಆದಮೇಲೆ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಾಪ್ ಸಿಂಹ ಏನು ದೊಡ್ಡ ಎಂಜಿನಿಯರ್ ಏನ್ರೀ? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಅದೆಲ್ಲೋ ಬರವಣಿಗೆ ಮಾಡಿಕೊಂಡು ಇದ್ದ ವ್ಯಕ್ತಿ ಪ್ರತಾಪ್ ಸಿಂಹ ಈಗ ನರೇಂದ್ರ ಮೋದಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಂದ ನಾನು ಕಲಿಯಬೇಕಾ? ಅವರು ಸುಖಾ ಸುಮ್ಮನೆ ನನ್ನನ್ನು ಕೆರಳಿಸುವುದು ಬೇಡ. ಹೆದ್ದಾರಿಯಲ್ಲಿ ನೀರು ನಿಂತದ್ದು ಒತ್ತುವರಿಯಿಂದನಾ? ಅದು ಆಗಿರುವುದು ಕಳಪೆ ಕಾಮಗಾರಿಯಿಂದ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಎಕ್ಸ್ ಪ್ರೆಸ್ ಹೈವೇ ಅಂಡರ್ ಪಾಸ್ ಗಳಲ್ಲಿ ನೀರು ನಿಂತಿದೆ. ಅದು ಯಾಕೆ ನಿಂತಿದೆ ಎನ್ನುವುದನ್ನು ಎಷ್ಟು ಸಲ ಹೇಳಲಿ. ಸಂಸದ ಪ್ರತಾಪ್ ಸಿಂಹ ಎಷ್ಟು ಕಡೆ ಹೋಗಿದ್ದಾರೆ. ಫೋಟೋ ತೆಗೆಸಿಕೊಳ್ಳಲು ಬಂದಿದ್ದರಲ್ಲ ಈಗ ಎಷ್ಟು ಕಡೆ ಬಂದಿದ್ದಾರೆ? ಇವರ ಹತ್ತಿರ ನಾನು ರಾಜಕೀಯ ಕಲಿಯಬೇಕಿಲ್ಲ. ಜನರ ಬದುಕೇನು ಎಂದು ಈತನಿಂದ ಕಲಿಯಬೇಕಿಲ್ಲ. ಜನರ ಕಷ್ಟ ಸುಖಾ ನೋಡಿ ರಾಜಕೀಯ ಮಾಡಿದ್ದರೆ ವಸ್ತುಸ್ಥಿತಿ ಏನೆಂದು ಗೊತ್ತಾಗುತ್ತಿತ್ತು. ಕೇವಲ ಬಿಜೆಪಿ, ಮೋದಿ ಹೆಸರಿನಲ್ಲಿ ರಾಜಕೀಯ ಮಾಡಿ ಎಂಪಿ ಆಗಿದ್ದಾರೆ. ಕಷ್ಟಪಟ್ಟು ಎಂಪಿ ಸ್ಥಾನ ಪಡೆದಿಲ್ಲ ಎಂದು ಅವರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಯಾರಿಗಾದರೂ ದೂರು ನೀಡಲಿ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ನಾನು ಸಿಎಂಗಲ್ಲದೇ ಯಾರಿಗೆ ಹೇಳಲಿ? ನಾನು ಗಡ್ಕರಿಯವರ ಸಮಯ ಕೇಳಿದ್ದೇನೆ. ಎಕ್ಸ್ ಪ್ರೆಸ್ ಹೈವೇಯ ಎಲ್ಲಾ ವಿಡಿಯೋ ಮಾಡಿಸಿದ್ದೇನೆ. ಅದೆಲ್ಲವನ್ನು ಅವರಿಗೆ ತಲುಪಿಸುತ್ತೇನೆ, ಅವರು ತೀರ್ಮಾನ ಮಾಡಲಿ. ಮುಂದೆ ಜನ ರಸ್ತೆಗೆ ಬಂದು ದೊಣ್ಣೆ ಹಿಡಿದು ಕುಳಿತುಕೊಳ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮೋದಿ ಯಾಕೆ ಬರುತ್ತಾರೆ?
ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು; ಮೋದಿ ಯಾಕೆ ಬರುತ್ತಾರೆ? ಯಾವ ಅನುದಾನ ಕೊಡುತ್ತಾರೆ? 2019ರಿಂದ ಕರ್ನಾಟಕದಲ್ಲಿ 35 – 40 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ NDRF ನಿಂದ ಕೇವಲ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಯಾವ ಪುರುಷಾರ್ಥಕ್ಕೆ ಅವರು ಬರುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಈಗ ಚುನಾವಣೆ ದೃಷ್ಟಿಯಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ತೆಗೆಯದಿದ್ದರೆ ಈ ಸಮಸ್ಯೆ ಪ್ರತಿವರ್ಷ ಬರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅಪಾಯಕಾರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.