ಟೆಹ್ರಾನ್: ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಹಿಡಿತವನ್ನು ಪ್ರದರ್ಶಿಸುತ್ತಿರುವ ಇರಾನ್, ಕಳೆದ 24 ಗಂಟೆಗಳಲ್ಲಿ 28 ವಾಣಿಜ್ಯ ನೌಕೆಗಳು ತಮ್ಮ ನೌಕಾಪಡೆಯ ಅನುಮತಿ ಮತ್ತು ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂಚರಿಸಿವೆ ಎಂದು ತಿಳಿಸಿದೆ.
ಇರಾನ್ ನೌಕಾಪಡೆಯ ನಿಯಂತ್ರಣ: ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು, ತೈಲ ಟ್ಯಾಂಕರ್ಗಳು ಮತ್ತು ಕಂಟೈನರ್ ಹಡಗುಗಳು ಸೇರಿದಂತೆ ಒಟ್ಟು 28 ನೌಕೆಗಳು ಇರಾನ್ನಿಂದ ಅಧಿಕೃತ ಅನುಮೋದನೆ ಪಡೆದು ಸಂಚರಿಸಿವೆ ಎಂದು ದೃಢಪಡಿಸಿದೆ.
ಜಲಸಂಧಿಯ ಮೇಲೆ ತಾವು ನಿರಂತರವಾಗಿ ಮತ್ತು ದೃಢವಾಗಿ “ಸ್ಮಾರ್ಟ್ ಕಣ್ಗಾವಲು” ನಡೆಸುತ್ತಿದ್ದೇವೆ ಎಂದು IRGC ಹೇಳಿದೆ. ಎಲ್ಲಾ ವಾಣಿಜ್ಯ ನೌಕೆಗಳು ನಿಗದಿತ ಮಾರ್ಗಗಳನ್ನು ಅನುಸರಿಸಬೇಕು ಮತ್ತು ಸಂಚರಿಸುವ ಮುನ್ನ ತಮ್ಮ ಅನುಮತಿ ಪಡೆಯುವುದು ಕಡ್ಡಾಯ ಎಂದು ಇರಾನ್ ಎಚ್ಚರಿಸಿದೆ.
ಪರ್ಷಿಯನ್ ಕೊಲ್ಲಿಯು ಈ ಪ್ರದೇಶದ ಮುಸ್ಲಿಂ ದೇಶಗಳಿಗೆ ಸೇರಿದ್ದು, ಇಲ್ಲಿನ ಅಸ್ಥಿರತೆಗೆ “ಅಮೆರಿಕದ ಉದ್ಧಟತನ ಮತ್ತು ಆಕ್ರಮಣಕಾರಿ ನೀತಿಗಳೇ” ಕಾರಣ ಎಂದು ಇರಾನ್ ದೂರಿದೆ.








