ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಇತ್ತೀಚೆಗಷ್ಟೇ ಹೊರಡಿಸಲಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ಉಪವಿಭಾಗಕ್ಕೆ ನೂತನ ಡಿವೈಎಸ್ಪಿ (Dy.SP) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಂಡರ್ ಸೆಕ್ರೆಟರಿ ಸಂಜಯ್ ಬಿ.ಎಸ್. ಅವರು ಮೇ 22, 2026 ರಂದು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಡಾ. ಬೆನಕ ಪ್ರಸಾದ್ ವರ್ಗಾವಣೆ ಆದೇಶ ರದ್ದು
ಕಳೆದ ಮೇ 21, 2026 ರಂದು ಹೊರಡಿಸಲಾಗಿದ್ದ ಆದೇಶದನ್ವಯ, ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ (ASP) ಡಾ. ಬೆನಕ ಪ್ರಸಾದ್ ಎನ್ ಜೆ, ಐಪಿಎಸ್ (KN 2022) ಅವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಇಂದಿನ ಹೊಸ ಆದೇಶದ ಪ್ರಕಾರ ಆ ವರ್ಗಾವಣೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಡಾ. ಬೆನಕ ಪ್ರಸಾದ್ ಅವರು ಯಥಾಸ್ಥಿತಿಯಲ್ಲಿ ಸಾಗರ ಉಪವಿಭಾಗದ ಎಎಸ್ಪಿ ಆಗಿಯೇ ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ.
ಶಿವಮೊಗ್ಗಕ್ಕೆ ಶೀಲವಂತ ಹೊಸಮನಿ ನೂತನ ಡಿವೈಎಸ್ಪಿ
ಬಳ್ಳಾರಿಯ CCPS ಆಗಿ ನಿಯೋಜನೆಗೊಂಡಿದ್ದ ಶೀಲವಂತ ಹೊಸಮನಿ, ಡಿವೈಎಸ್ಪಿ (ಸಿವಿಲ್) ಅವರ ಆದೇಶವನ್ನು ಸರ್ಕಾರ ಮಾರ್ಪಡಿಸಿದೆ. ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶಿವಮೊಗ್ಗ ಉಪವಿಭಾಗ-1 ರ ಉಪ ಪೊಲೀಸ್ ಅಧೀಕ್ಷಕರು (Deputy Superintendent of Police – Dy.SP) ಆಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಮಹತ್ವದ ಆಡಳಿತಾತ್ಮಕ ಆದೇಶದ ಪ್ರತಿಗಳನ್ನು ಕರ್ನಾಟಕ ಗಜೆಟ್, ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್, ಕೇಂದ್ರ ಗೃಹ ಸಚಿವಾಲಯ, ಮುಖ್ಯಮಂತ್ರಿಗಳ ಕಚೇರಿ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಸೇರಿದಂತೆ ಸಂಬಂಧಪಟ್ಟ ಎಲ್ಲಾ ಉನ್ನತಾಧಿಕಾರಿಗಳಿಗೆ ಅಗತ್ಯ ಕ್ರಮಗಳಿಗಾಗಿ ರವಾನಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









