ಬೆಂಗಳೂರು: ಮುಂಬರುವ ಬಿಬಿಎಂಪಿ (GBA) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷದ ಸಾಂಘಿಕ ಬಲವರ್ಧನೆ ಕುರಿತು ಚರ್ಚಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮೇ 24ರ ಭಾನುವಾರ ದೇವನಹಳ್ಳಿಯಲ್ಲಿ ಮಹತ್ವದ ವಿಶೇಷ ಸಭೆಯನ್ನು ಹಮ್ಮಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಪಕ್ಷದ ಪ್ರಮುಖ ನಾಯಕರಿಗೆ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಗಿದೆ.
ಸಭೆಯ ಪ್ರಮುಖ ಅಜೆಂಡಾಗಳು
ಮುಂಬರುವ ಜಿಬಿಎಂಪಿ (GBA) ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆ, ಎಸ್ಐಆರ್ (SIR) ಪ್ರಕ್ರಿಯೆ ಮತ್ತು ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಲು ಈ ವಿಶೇಷ ಸಭೆಯನ್ನು ಕರೆಯಲಾಗಿದೆ.
ಘಟಾನುಘಟಿ ನಾಯಕರ ಉಪಸ್ಥಿತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೂದಿಗೆರೆ ರಸ್ತೆಯಲ್ಲಿರುವ ‘ಬ್ರಿಗೇಡ್ ಆರ್ಚರ್ಡ್ಸ್’ (Brigade Orchards) ಆವರಣದಲ್ಲಿ ಭಾನುವಾರ ಸಂಜೆ 4:00 ಗಂಟೆಗೆ ಸಭೆ ನಿಗದಿಯಾಗಿದೆ. ಈ ಹೈವೋಲ್ಟೇಜ್ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿಗಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಭಾಗವಹಿಸಲಿದ್ದಾರೆ.
ಯಾರಿಗೆಲ್ಲಾ ಆಹ್ವಾನ?
ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು (ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು), 2023/2024ರ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳ ಅಭ್ಯರ್ಥಿಗಳು ಮತ್ತು ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳ (DCC) ಅಧ್ಯಕ್ಷರುಗಳಿಗೆ ಈ ಸಭೆಗೆ ಬರಲು ತಿಳಿಸಲಾಗಿದೆ.
ಒಂಟಿಯಾಗಿ ಬರಲು ಡಿಕೆಶಿ ಖಡಕ್ ಸೂಚನೆ!
ಈ ಸಭೆಯು ಅತ್ಯಂತ ಪ್ರಮುಖ ಹಾಗೂ ರಹಸ್ಯ ಸ್ವರೂಪದ್ದಾಗಿರುವುದರಿಂದ, ಸಭೆಗೆ ಆಹ್ವಾನಿತರಾಗಿರುವ ನಾಯಕರು ತಮ್ಮೊಂದಿಗೆ ಬೇರೆ ಯಾರನ್ನೂ (ಬೆಂಬಲಿಗರು ಅಥವಾ ಸಹಾಯಕರು) ಕರೆತರಬಾರದು. ಕೇವಲ ತಾವೊಬ್ಬರೇ ಬಂದು ಸಭೆಯಲ್ಲಿ ಭಾಗವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ಕಡ್ಡಾಯದ ಸೂಚನೆ ನೀಡಿದ್ದಾರೆ.
ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
ಶಿವಮೊಗ್ಗದ ಹೊಸನಗರದಲ್ಲಿ ‘ಭೂಮಾಫಿಯಾ’ ಅಟ್ಟಹಾಸ: ಜೆಸಿಬಿ, ಹಿಟಾಚಿ ಬಳಸಿ ’20 ಎಕರೆ ಸರ್ಕಾರಿ ಜಮೀನು’ ಒತ್ತುವರಿ!








