ಮುಂಬೈ: ಐಪಿಎಲ್ 2026ರ ಆರಂಭದಲ್ಲೇ ದೊಡ್ಡ ವಿವಾದವೊಂದು ಕಿಡಿ ಹೊತ್ತಿಸಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯದಲ್ಲಿ ‘ಟಾಸ್ ಫಿಕ್ಸಿಂಗ್’ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.
ಪಂದ್ಯದ ಆರಂಭದಲ್ಲಿ ಟಾಸ್ ಪ್ರಕ್ರಿಯೆ ನಡೆಯುವಾಗ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನಾಣ್ಯವನ್ನು ಚಿಮ್ಮಿಸಿದರು. ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ‘ಟೈಲ್ಸ್’ ಎಂದು ಕರೆ ನೀಡಿದರು. ಆದರೆ, ನಾಣ್ಯ ಕೆಳಗೆ ಬೀಳುವ ಸರಿಯಾದ ಸಮಯದಲ್ಲಿ ಬ್ರಾಡ್ಕಾಸ್ಟ್ ಕ್ಯಾಮೆರಾ ಆಂಗಲ್ ದಿಢೀರನೆ ಬದಲಾಯಿತು. ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಾಣ್ಯ ಎಲ್ಲಿ ಬಿತ್ತು ಅಥವಾ ಯಾವ ಮುಖ ತೋರಿಸಿತು ಎಂಬುದು ಸ್ಪಷ್ಟವಾಗಿ ಕಾಣಿಸಲಿಲ್ಲ. ತಕ್ಷಣವೇ ಮ್ಯಾಚ್ ರೆಫ್ರಿ ನಾಣ್ಯವನ್ನು ಎತ್ತಿಕೊಂಡು ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದು ಘೋಷಿಸಿದರು.
ನಾಣ್ಯ ಕೆಳಗೆ ಬೀಳುವ ಕ್ಷಣದಲ್ಲೇ ಕ್ಯಾಮೆರಾ ಆಂಗಲ್ ಬದಲಾಗಿದ್ದು ಕಾಕತಾಳೀಯವೇ ಅಥವಾ ಉದ್ದೇಶಪೂರ್ವಕವೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.ಈ ಹಿಂದೆಯೂ ಮುಂಬೈ ಇಂಡಿಯನ್ಸ್ ಪಂದ್ಯಗಳಲ್ಲಿ ಇಂತಹ ಟಾಸ್ ವಿವಾದಗಳು ನಡೆದಿದ್ದವು. “ಇಂತಹ ಘಟನೆಗಳು ಕೇವಲ ಮುಂಬೈ ಪಂದ್ಯಗಳಲ್ಲೇ ಏಕೆ ನಡೆಯುತ್ತವೆ?” ಎಂದು ಕೆಕೆಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟಾಸ್ ವೇಳೆ ಕ್ಯಾಮೆರಾ ಕಟ್ ಆಗಿರುವ ವಿಡಿಯೋ ಕ್ಲಿಪ್ಗಳು ಈಗ ಎಕ್ಸ್ (ಟ್ವಿಟರ್) ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಇದನ್ನು “ಟಾಸ್ ಫಿಕ್ಸಿಂಗ್” ಮತ್ತು “ಸ್ಕ್ರಿಪ್ಟೆಡ್ ಐಪಿಎಲ್” ಎಂದು ಟೀಕಿಸುತ್ತಿದ್ದಾರೆ.







