ಮಂಡ್ಯ ಜೂನ್ 6 (ಕರ್ನಾಟಕ ವಾರ್ತೆ) 12 ನೇ ವಿಶ್ವ ಯೋಗ ದಿನವನ್ನು ಜೂನ್ 21ರಂದು ನಗರ ಪಿ. ಇ. ಎಸ್. ಇಂಜಿನಿಯರ್ ಕಾಲೇಜಿನ ಪಿ.ಇ.ಟಿ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷದ ಜೂನ್ 21 ರಂದು ಕಾರ್ಯಕ್ರಮವನ್ನು ಮಂಡ್ಯದ ಪಿ.ಇ.ಟಿ (PET) ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಸತಿ ನಿಲಯದ ನಿವಾಸಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ಮಹಿಳಾ ಸಂಘಟನೆಗಳು ಮತ್ತು ಯೋಗ ಸಂಸ್ಥೆಗಳು ಸೇರಿದಂತೆ 10, 000 ಕ್ಕೂ ಹೆಚ್ಚು ಜನರು ಭಾಗವಹಿಸುವಂತೆ ಸಿದ್ಧತೆ ಮಾಡಲು ಸೂಚಿಸಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವ ಅರಿತು ಸಂಬಂಧಪಟ್ಟ ವಿವಿಧ ಇಲಾಖೆಗಳು ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕು. ಶಾಲಾ, ಕಾಲೇಜು ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮತ್ತು ಬರಲು ಅಗತ್ಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕಾರ್ಯಕ್ರಮವು ಯಶಸ್ವಿಯಾಗಲು ಯೋಗ ಶಿಕ್ಷಕರನ್ನು ಸಂಯೋಜಕರನ್ನಾಗಿ ನೇಮಿಸಿ, ಭಾಗವಹಿಸುವವರಿಗೆ 2 ರಿಂದ 3 ದಿನಗಳ ಮುಂಚಿತವಾಗಿ ತರಬೇತಿ ನೀಡಲಾಗುತ್ತದೆ.
ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ್ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ಅವರು ಮಾತನಾಡಿ, ಆಯುಷ್ ಇಲಾಖಾ ಮಾರ್ಗಸೂಚಿಗಳ ಅನುಸಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಥಳ ನಿಗದಿ ಮಾಡುವುದು, ಯೋಗಭ್ಯಾಸಗಾರರನ್ನು ಸಜ್ಜುಗೊಳಿಸುವುದು, ಯೋಗ ಪ್ರೋಟೋಕಾಲ್‍ನ ಪ್ರಕಾರ ಯೋಗಾಸನಗಳನ್ನು ಪೂರ್ವಭ್ಯಾಸ ಮಾಡಿಸುವುದರ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಂಡ್ಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮೀರಾಶಿವಲಿಂಗಯ್ಯ ಹಾಗೂ ಜಿಲ್ಲಾ ಮಟ್ಠದ ಅಧಿಕಾರಿಗಳು ಉಪಸ್ಥಿತರಿದ್ದರು.








