ಮಂಡ್ಯ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಇದೆ 30 ರಂದು ರಾಜಭವನ ಚಲೋಗೆ ಕರೆ ನೀಡಿದೆ. ಈ ವಿಚಾರವಾಗಿ ಕೇಂದ್ರ ಸಚಿವ HD ಕುಮಾರಸ್ವಾಮಿ ರಾಜಭವನ ಚಲೋ ಬದಲು ಸೋನಿಯಾ ಗಾಂಧಿ ಮನೆ ಚಲೋ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು 30ನೇ ತಾರೀಖು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ. ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಕೂಡ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ. ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿ ಎಂದು ಸಚಿವರು ಸವಾಲು ಹಾಕಿದರು.
ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.