ನವದೆಹಲಿ: ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಬಾಂಧವ್ಯವು ಹೊಸ ಎತ್ತರಕ್ಕೆ ತಲುಪಿದೆ. ಇರಾನ್ನ ಸರ್ವೋಚ್ಚ ನಾಯಕ (Supreme Leader) ಆಯತೊಲ್ಲಾ ಅಲಿ ಖಮೇನಿ ಅವರ ಭಾರತದ ಪ್ರತಿನಿಧಿಯಾದ ಅಯತೊಲ್ಲಾ ಮಹದಿ ಮಹದವಿಪುರ್ ಅವರು ಭಾರತೀಯರ ಗುಣಸ್ವಭಾವ ಮತ್ತು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಯಶಸ್ಸನ್ನು ಶ್ಲಾಘಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹದವಿಪುರ್, “ಭಾರತೀಯರು ಅತ್ಯಂತ ದಯಾಮಯಿಗಳು, ಸ್ನೇಹಪರರು ಮತ್ತು ಪ್ರಾಮಾಣಿಕರು. ಭಾರತದ ವೈವಿಧ್ಯತೆ ಮತ್ತು ಇಲ್ಲಿನ ಜನರ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ,” ಎಂದು ಬಣ್ಣಿಸಿದರು.
ಇತ್ತೀಚೆಗೆ ಭಾರತ ಮತ್ತು ಇರಾನ್ ನಾಯಕರ ನಡುವೆ ನಡೆದ ರಾಜತಾಂತ್ರಿಕ ಮಾತುಕತೆಗಳು ಅತ್ಯಂತ ಫಲಪ್ರದವಾಗಿವೆ. ಉಭಯ ದೇಶಗಳ ನಾಯಕರು ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಪ್ರಮುಖ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಭಾರತ ಮತ್ತು ಇರಾನ್ ಕೇವಲ ವ್ಯಾಪಾರ ಸಂಬಂಧವನ್ನಷ್ಟೇ ಹೊಂದಿಲ್ಲ, ಬದಲಿಗೆ ಶತಮಾನಗಳ ಹಿಂದಿನ ಸಾಂಸ್ಕೃತಿಕ ಮತ್ತು ಭಾಷಾ ಬಾಂಧವ್ಯವನ್ನು ಹೊಂದಿವೆ ಎಂದು ಅವರು ನೆನಪಿಸಿದರು.








