ಬೆಂಗಳೂರು: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಹಾಗೂ ಶಾಲಾ ಡೈಸ್ (DISE) ಕೋಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಜೂನ್ 30 ಕೊನೆಯ ದಿನಾಂಕ
ಈ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 30, 2026ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮನವಿಯ ಮೇರೆಗೆ, ಜೂನ್ 3, 2026 ರಿಂದ ಜೂನ್ 30, 2026ರ ವರೆಗೆ ಒಟ್ಟು 28 ದಿನಗಳ ಕಾಲ ಅಂತಿಮವಾಗಿ ಅವಧಿ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಆಡಳಿತ ಮಂಡಳಿಗಳೆರಡಕ್ಕೂ ಈ ಅವಕಾಶ ಅನ್ವಯವಾಗುತ್ತದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್ಸೈಟ್ (https://schooleducation.karnataka.gov.in/) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ:
ಮಾರ್ಪಡಿಸಿದ ತಂತ್ರಾಂಶ ಬಿಡುಗಡೆ: ಜೂನ್ 8, 2026
ಆನ್ಲೈನ್ ಅರ್ಜಿ ಸಲ್ಲಿಕೆ ಅವಧಿ: ಜೂನ್ 8 ರಿಂದ ಜೂನ್ 30, 2026
ನೋಂದಣಿ ಶುಲ್ಕ ಪಾವತಿ (ಚಲನ್ ಜನರೇಟ್ ಮಾಡಲು ಕೊನೆಯ ದಿನ):
ಕ್ಯಾಶ್ ಮೋಡ್ (Cash Mode): ಜೂನ್ 23, 2026
ಆನ್ಲೈನ್/ಯುಪಿಐ ಮೋಡ್ (Online/UPI Mode): ಜೂನ್ 27, 2026
DDPI ನಿಂದ ಅನುಮೋದನೆ/ತಿರಸ್ಕಾರ ಆದೇಶದ ಕಾಲಾವಧಿ: ಜೂನ್ 15 ರಿಂದ ಜೂನ್ 23, 2026
ಡೈಸ್ ಕೋಡ್ (DISE Code) ನೀಡಲು ನಿಗದಿಪಡಿಸಿದ ದಿನಾಂಕ: ಆಗಸ್ಟ್ 20, 2026
ಮತ್ತೊಮ್ಮೆ ಕಾಲಾವಕಾಶವಿಲ್ಲ!
ಆರ್ಟಿಇ (RTE) ಕಾಯ್ದೆಯ ನಿಯಮಗಳ ಪ್ರಕಾರ, ಶಾಲೆಗಳು ಕನಿಷ್ಠ ಶೈಕ್ಷಣಿಕ ದಿನಗಳು ಹಾಗೂ ಬೋಧನಾ ಅವಧಿಯನ್ನು ಪೂರೈಸಬೇಕಾಗಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಈ ಕಾಲಾವಕಾಶವನ್ನು ಮತ್ತೊಮ್ಮೆ ವಿಸ್ತರಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆಡಳಿತ ಮಂಡಳಿಗಳಿಗೆ ವಿಶೇಷ ಸೂಚನೆ:
ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಅಥವಾ ನೋಂದಣಿ ಪ್ರಮಾಣಪತ್ರ ಪಡೆಯದೆಯೇ ಹೊಸ ಶಾಲೆ ಅಥವಾ ಉನ್ನತೀಕರಿಸಿದ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ದಾಖಲಾತಿ ಮಾಡಿಕೊಂಡರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಮೇಲ್ಮನವಿ ಸಲ್ಲಿಸಲು ಬಯಸುವ ಆಡಳಿತ ಮಂಡಳಿಗಳು ಅರ್ಜಿ ತಿರಸ್ಕೃತಗೊಂಡ 30 ದಿನಗಳ ಒಳಗಾಗಿ ಆನ್ಲೈನ್ ಮೂಲಕವೇ ಮೇಲ್ಮನವಿ ಪ್ರಾಧಿಕಾರಕ್ಕೆ (ವಿಭಾಗೀಯ ಆಯುಕ್ತರು) ಅರ್ಜಿ ಸಲ್ಲಿಸಬೇಕು. ಯಾವುದೇ ಭೌತಿಕ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿಗಳ ಪರಿಶೀಲನೆಯಲ್ಲಿ ವಿಳಂಬ ಧೋರಣೆ ತೋರಿದರೆ ಅಥವಾ ನಿಗದಿತ ಅವಧಿ ಮೀರಿದರೆ (Overdue) ಸಂಬಂಧಪಟ್ಟ ಉಪನಿರ್ದೇಶಕರನ್ನೇ (DDPI) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.









