ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ಕಟ್ಟುನಿಟ್ಟಿನ ದಿಗ್ಬಂಧನದ ನಡುವೆಯೂ ಭಾರತಕ್ಕೆ ದೊಡ್ಡ ಮಟ್ಟದ ತೈಲ ಪೂರೈಕೆಯಾಗಿದೆ. ಇರಾನ್‌ನಿಂದ ಸುಮಾರು 60 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ಯಶಸ್ವಿಯಾಗಿ ಭಾರತದ ಬಂದರುಗಳನ್ನು ತಲುಪಿದೆ ಎಂದು ವರದಿಯಾಗಿದೆ.
ಅಮೆರಿಕದ ಎಚ್ಚರಿಕೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಉದ್ವಿಗ್ನತೆ ಇರುವುದರಿಂದ ತೈಲ ಸಾಗಾಣಿಕೆ ಸ್ಥಗಿತಗೊಳ್ಳಬಹುದು ಎಂಬ ಆತಂಕವಿತ್ತು. ಆದರೆ, ಈ ಬಿಕ್ಕಟ್ಟಿನ ನಡುವೆಯೇ ಇರಾನ್‌ನ ತೈಲ ಟ್ಯಾಂಕರ್‌ಗಳು ಭಾರತದ ಕಡೆಗೆ ಸಾಗಿ ಬಂದಿವೆ.
ದೇಶದಲ್ಲಿ ತೈಲ ಬೆಲೆ ಏರಿಕೆಯ ಭೀತಿಯಲ್ಲಿದ್ದ ಜನತೆಗೆ ಈ ಬೆಳವಣಿಗೆ ತುಸು ನೆಮ್ಮದಿ ನೀಡಿದೆ. ಇರಾನ್‌ನಿಂದ ಬಂದಿರುವ ಈ ಬೃಹತ್ ಪ್ರಮಾಣದ ತೈಲವು ಭಾರತದ ಆರ್ಥಿಕತೆಗೆ ಮತ್ತು ಇಂಧನ ಭದ್ರತೆಗೆ ಅತ್ಯಂತ ಸಹಕಾರಿಯಾಗಲಿದೆ.
ಅಮೆರಿಕದ ಟ್ರಂಪ್ ಆಡಳಿತವು ಇರಾನ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿರುವ ಬೆನ್ನಲ್ಲೇ ಭಾರತ ಈ ಮಟ್ಟದ ತೈಲವನ್ನು ಸ್ವೀಕರಿಸುತ್ತಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.







