ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಜ್ಜಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಂದು ವಿಶೇಷ ಸಾಧನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.
ಡಿಕೆಶಿ ಆಸ್ತಿ ಎಷ್ಟು?
ADR ಹಾಗೂ ಚುನಾವಣಾ ಅಫಿಡವಿಟ್ಗಳ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಘೋಷಿಸಿರುವ ಒಟ್ಟು ಆಸ್ತಿ ಮೌಲ್ಯ ಸುಮಾರು ₹1,413 ಕೋಟಿ. ಈ ಮೂಲಕ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ ರಾಜಕಾರಣಿಯಾಗಿ ಅವರು ಗುರುತಿಸಿಕೊಳ್ಳಲಿದ್ದಾರೆ.
ಘೋಷಿತ ವಿವರಗಳ ಪ್ರಕಾರ, ಸುಮಾರು ₹273 ಕೋಟಿ ಮೌಲ್ಯದ ಚರ ಆಸ್ತಿ ಹಾಗೂ ₹1,140 ಕೋಟಿ ಮೌಲ್ಯದ ಸ್ಥಿರ ಆಸ್ತಿ ಅವರ ಹೆಸರಿನಲ್ಲಿದೆ. ಸ್ಥಿರ ಆಸ್ತಿಯಲ್ಲಿ ಭೂಮಿ, ಕಟ್ಟಡಗಳು ಹಾಗೂ ವಿವಿಧ ಹೂಡಿಕೆಗಳು ಪ್ರಮುಖ ಪಾಲು ಹೊಂದಿವೆ. ಇದೇ ವೇಳೆ, ತಮ್ಮ ಮೇಲೆ ₹265 ಕೋಟಿಗೂ ಅಧಿಕ ಸಾಲ ಇರುವುದನ್ನೂ ಅವರು ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದರು.
ಚಂದ್ರಬಾಬು ನಾಯ್ಡು
ಈವರೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಪ್ರಮುಖ ಸ್ಥಾನದಲ್ಲಿದ್ದರು. 2024ರ ಚುನಾವಣೆಗೆ ಮುನ್ನ ಅವರು ಸುಮಾರು ₹931 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದರು. ಆದರೆ ಡಿ.ಕೆ. ಶಿವಕುಮಾರ್ ಅವರ ಘೋಷಿತ ಆಸ್ತಿ ಇದಕ್ಕಿಂತ ಗಮನಾರ್ಹವಾಗಿ ಹೆಚ್ಚಿರುವುದರಿಂದ, ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.








