ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣ ಸಮೀಪದ ಅರಳಿಕೊಪ್ಪ ಗ್ರಾಮದ ಜನ್ನತ್‌ನಗರದಲ್ಲಿರುವ 136 ಕುಟುಂಬಗಳಿಗೆ ಶನಿವಾರದೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ನಗರಸಭೆಯ ಎದುರು ನಿವಾಸಿಗಳೊಂದಿಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ತೀ.ನ.ಶ್ರೀನಿವಾಸ್ ಡೆಡ್ ಲೈನ್ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, “ರಾಜ್ಯ ಸರ್ಕಾರವು ಹಿಂದೆ ಒಟ್ಟು 600 ಮನೆಗಳಿಗೆ ಹಕ್ಕುಪತ್ರ ನೀಡಿತ್ತು. ಅದರಲ್ಲಿ ಜನ್ನತ್ ನಗರದ 136 ಮನೆಗಳು ಸಹ ಸೇರಿವೆ. ಆದರೆ, ಈ ಮನೆ ಮಾಲೀಕರಿಗೆ ‘ಇ-ಸ್ವತ್ತು’ ಮಾಡಿಕೊಡದೆ ನಗರಸಭೆಯು ಸತಾಯಿಸುತ್ತಿರುವುದು ಖಂಡನೀಯ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ವರ್ಷಗಳ ಅಲೆದಾಟ
“ಜನ್ನತ್ ನಗರ ಬಡಾವಣೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ 136 ಕುಟುಂಬಗಳು ವಾಸವಿದ್ದು, ನಗರಸಭೆಗೆ ನಿಯಮಿತವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿವೆ. ಆದಾಗ್ಯೂ ಅವರಿಗೆ ಫಾರಂ ನಂ. 3 ನೀಡುತ್ತಿಲ್ಲ. ಕಳೆದ ಎಂಟು ವರ್ಷಗಳಿಂದ ಈ ಕುಟುಂಬಗಳು ಫಾರಂ ನಂ. 3 ಮತ್ತು ಇ-ಸ್ವತ್ತು ಮಾಡಿಸಿಕೊಳ್ಳಲಾಗದೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಈ ಕುರಿತು ಮಾಜಿ ಹಾಗೂ ಹಾಲಿ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಯಾರೂ ಸೂಕ್ತ ನ್ಯಾಯ ದೊರಕಿಸಿಕೊಟ್ಟಿಲ್ಲ” ಎಂದು ದೂರಿದರು.

ನಗರಸಭೆಯ ಆಡಳಿತ ವೈಖರಿಯನ್ನು ಟೀಕಿಸಿದ ಅವರು, “ನಗರಸಭೆಯಲ್ಲಿ ಹಣ ಕೊಟ್ಟರೆ ಯಾವ ಕೆಲಸ ಬೇಕಾದರೂ ಮಾಡಿಕೊಡುತ್ತಾರೆ. ನಗರಸಭೆ ವ್ಯಾಪ್ತಿಯಲ್ಲಿ ಬಹುಕೋಟಿ ಮೊತ್ತದ ‘ಸೇಲ್ ಸರ್ಟಿಫಿಕೇಟ್’ ಹಗರಣ ನಡೆದಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಬಡ ಕುಟುಂಬಗಳು ಇ-ಸ್ವತ್ತು ಮಾಡಿಕೊಡಿ ಎಂದು ಅಂಗಲಾಚಿದರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ” ಎಂದು ಆರೋಪಿಸಿದರು.
ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಬಡವರು
ಸ್ಥಳೀಯ ನಿವಾಸಿ ಅಶ್ವಿನಿ ಹೆಗಡೆ ಮಾತನಾಡಿ, “ಜನ್ನತ್ ನಗರದಲ್ಲಿರುವ 136 ಕುಟುಂಬಗಳಲ್ಲಿ ಶೇಕಡಾ 90 ರಷ್ಟು ಜನರು ಕಡುಬಡವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಫಾರಂ ನಂ. 3 ಮತ್ತು ಇ-ಸ್ವತ್ತು ಇಲ್ಲದ ಕಾರಣ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಮನೆ ಹಕ್ಕಿಗಾಗಿ ನಗರಸಭೆ ಎದುರು ಪ್ರತಿಭಟನೆ ಮಾಡುವುದು ನಮಗೆ ಅನಿವಾರ್ಯವಾಗಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸತೀಶ್ ಕೆ., ಶ್ರೀಧರ ಜೋಗಿ, ಮಹ್ಮದ್ ಫೈರೋಜ್ ಹಾಗೂ ಸಿದ್ದಿಕ್ ಫಿರ್ದೋಷ್ ಉಪಸ್ಥಿತರಿದ್ದರು.
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ








