ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಶ್ರೀ ಸ್ಥಾನಕ್ಕೆ ನೂತನ ಪೀಠಾಧಿಪತಿ ನೇಮಿಸುವಂತೆ ಮಠದ ವಿರೋಧಿ ಬಣ ಸಭೆ ನಡೆಸಿದೆ. ಈ ಬೆನ್ನಲ್ಲೆ ಶೂನ್ಯ ಪೀಠ ಪರಂಪರೆಯ ಮುರುಘಾ ಮಠಕ್ಕೆ ಶೂದ್ರರನ್ನು ಪೀಠಾಧಿಪತಿಯಾಗಿ ನೇಮಿಸುವಂತೆ ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಪಟ್ಟು ಹಿಡಿದ್ದಾರೆ.
ಮುರುಘಾ ಶ್ರೀ ಬದಲಾವಣೆಗೆ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಶೂನ್ಯಪೀಠದ ಪರಂಪರೆಯ ಮಠದಲ್ಲಿ ಸರ್ವಧರ್ಮ, ಜಾತಿಗಳಿಗೂ ಸಮಾನ ಹಕ್ಕು ನೀಡಿರುವ ಪೀಠ ಇದಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಠ ಸೀಮಿತವಾಗಿಲ್ಲ. ಮುರುಘಾಶ್ರೀ ಬದಲಾವಣೆಗೆ ಕೇವಲ ಒಂದು ಕೋಮಿನವರಿಗೆ ಅಧಿಕಾರ ಕೊಟ್ಟವರ್ಯಾರು? ಇದು ಬಸವತತ್ವದಡಿ ಬೆಳೆದು ನಿಂತಿರುವ ಪೀಠವಾಗಿದೆ ಎಂದರು.
ಶೂದ್ರರಾದ ಅಲ್ಲಮಪ್ರಭು ಈ ಪೀಠದ ಮೂಲ ಪೀಠಾಧ್ಯಕ್ಷರಾಗಿದ್ದರು. ಆದರೆ ಮುರುಘಾ ಶ್ರೀ ವಿರುದ್ಧ ಕೇಳಿಬಂದಿರುವ ಪೋಕ್ಸೋ ಆರೋಪದ ಬೆನ್ನಲ್ಲೇ ಶೂನ್ಯಪೀಠವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಸಭೆ ನಡೆಸಿದ್ದು ಸರಿಯಲ್ಲ. ಈ ಮುರುಘಾ ಮಠ ವೀರಶೈವ ಲಿಂಗಾಯತರ ಆಸ್ತಿಯಲ್ಲ. ಶೂದ್ರರನ್ನು ಮಠದಲ್ಲಿ ಕಡೆಗಣಿಸಲಾಗ್ತಿದೆ ಎಂದು ಕಿಡಿಕಾರಿದರು.