ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಮುರಿದ ಓಟಗಾರರಾದ ಗುರಿಂದರ್ವೀರ್ ಸಿಂಗ್ ಮತ್ತು ಅನಿಮೇಶ್ ಕುಜೂರ್ ಅವರ ಸಾಧನೆಯನ್ನು ಶ್ಲಾಘಿಸಿದರು.
“ರಾಂಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು. ಗುರಿಂದರ್ವೀರ್ ಸಿಂಗ್, ವಿಶಾಲ್ ಟಿ.ಕೆ., ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ ಸೇರಿದಂತೆ ಹಲವರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಪುರುಷರ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆಯು ಕೇವಲ ಎರಡು ದಿನಗಳಲ್ಲಿ ಮೂರು ಬಾರಿ ಮುರಿಯಲ್ಪಟ್ಟಿದೆ. ಈ ಸಾಧನೆ ಮಾಡಿದ ಗುರಿಂದರ್ವೀರ್ ಮತ್ತು ಅನಿಮೇಶ್ ಕುಜೂರ್ ಅವರೊಂದಿಗೆ ನಾನು ಇಂದು ಮಾತನಾಡಿದ್ದೇನೆ” ಎಂದು ಪ್ರಧಾನಿ ತಿಳಿಸಿದರು.
ತಮ್ಮ ಸಂವಾದದಲ್ಲಿ, ಈ ಅಥ್ಲೀಟ್‌ಗಳು ತಮ್ಮ ಹಿನ್ನೆಲೆ, ಸವಾಲುಗಳು ಮತ್ತು ಪರಸ್ಪರ ಸ್ನೇಹದ ಬಗ್ಗೆ ಹಂಚಿಕೊಂಡರು. “ಭಾರತೀಯರ ದೇಹರಚನೆ ಸ್ಪ್ರಿಂಟಿಂಗ್‌ಗೆ ಸೂಕ್ತವಲ್ಲ” ಎಂಬ ಅಭಿಪ್ರಾಯಗಳನ್ನು ಸುಳ್ಳಾಗಿಸಿ, ಸವಾಲನ್ನು ಸ್ವೀಕರಿಸಿ ಸಾಧನೆ ಮಾಡಿದ್ದಾಗಿ ಅವರು ಹೇಳಿದರು. ಇಬ್ಬರೂ ಕಾಮನ್‌ವೆಲ್ತ್ ಗೇಮ್ಸ್‌ಗೆ ಈಗಾಗಲೇ ಆಯ್ಕೆಯಾಗಿದ್ದಾರೆ. “ನಿಮ್ಮ ಈ ಕ್ರೀಡಾಸ್ಫೂರ್ತಿ ಮತ್ತು ಪರಸ್ಪರ ಬೆಂಬಲವು ದೇಶಕ್ಕೆ ಖಂಡಿತವಾಗಿಯೂ ಗೌರವ ತರಲಿದೆ” ಎಂದು ಪ್ರಧಾನಿ ಶುಭ ಹಾರೈಸಿದರು.
ನೆದರ್‌ಲ್ಯಾಂಡ್‌ಗೆ ನೀಡಿದ ಇತ್ತೀಚಿನ ಭೇಟಿಯ ಬಗ್ಗೆ ಪ್ರತಿಯೊಂದು ಭಾರತೀಯನೂ ಹೆಮ್ಮೆಪಡುವ ವಿಚಾರವೊಂದನ್ನು ಪ್ರಧಾನಿ ಹಂಚಿಕೊಂಡರು. “ನೆದರ್‌ಲ್ಯಾಂಡ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಚೋಳರ ಕಾಲದ ಪ್ರಾಚೀನ ತಾಮ್ರಪಟಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಇವು ಮೊದಲನೇ ರಾಜೇಂದ್ರ ಚೋಳರ ಕಾಲಕ್ಕೆ ಸೇರಿದ ಒಟ್ಟು 24 ತಾಮ್ರಪಟಗಳಾಗಿವೆ. ಇವು ಅಂದಿನ ಚೋಳ ಸಾಮ್ರಾಜ್ಯದ ಬಲಿಷ್ಠ ನೌಕಾಪಡೆ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತವೆ” ಎಂದು ವಿವರಿಸಿದರು.








