ಬೆಂಗಳೂರು: ಭಾರತದಲ್ಲಿ ಶೇ.60 ರಷ್ಟು ಸಾವುಗಳು ಜೀವನಶೈಲಿ ಸಂಬಂಧಿತ ಕಾಯಿಲೆಗಳಾದ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಒಂಟಿತನಕ್ಕೆ ಸಂಬಂಧಿಸಿದ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಂದ ಉಂಟಾಗುತ್ತವೆ. ಸದ್ದಿಲ್ಲದೆ ಕಾಡುವ ಈ ಸಾಂಕ್ರಾಮಿಕ ರೋಗವನ್ನು ಪರಿಹರಿಸದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಸಂಸದ ಮತ್ತು ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಇಂದು ಎಂಜಿನಿಯರ್‌ಗಳ ದಿನದಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ವತಿಯಿಂದ (FKCCI) ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ನ್ನು ಕೈಗಾರಿಕಾ ಬೆಳವಣಿಗೆಗೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ, ನೀರಿನ ಸುರಕ್ಷತೆ ಮತ್ತು ಪರಿಸರ ಸುಸ್ಥಿರತೆಗೂ ಬಳಸಿಕೊಳ್ಳಬೇಕು ಎಂದು ಡಾ. ಮಂಜುನಾಥ್ ಒತ್ತಿ ಹೇಳಿದರು. “ಶುದ್ಧ ಗಾಳಿ, ಶುದ್ಧ ನೀರು, ಕಲಬೆರಕೆಯಿಲ್ಲದ ಆಹಾರ ಮತ್ತು ಶುದ್ಧ ಮನಸ್ಸು ಆರೋಗ್ಯದ ನಿಜವಾದ ಮೂಲಾಧಾರಗಳಾಗಿವೆ. ಶಸ್ತ್ರಚಿಕಿತ್ಸೆಯಲ್ಲಿ ರೊಬೊಟಿಕ್ಸ್ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಸಂಶೋಧನೆ, ಪ್ರಗತಿಗಳು ರೋಗಿಗಳಿಗೆ ಚಿಕಿತ್ಸೆ ನೀಡಬಹುದು, ಆದರೆ ರೋಗವನ್ನು ತಡೆಗಟ್ಟಲು ಉತ್ತಮ ನಗರ ಯೋಜನೆ, ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರ ಎಂಜಿನಿಯರಿಂಗ್ ಅವಶ್ಯಕತೆಯಿದೆ” ಎಂದು ಅವರು ಹೇಳಿದರು.
ಭಾರತದಲ್ಲಿ ಪ್ರತಿ ವರ್ಷ ಧೂಮಪಾನದಿಂದ 14 ಲಕ್ಷ ಜನರು ಮತ್ತು ವಾಯು ಮಾಲಿನ್ಯದಿಂದ ವರ್ಷಕ್ಕೆ 22 ಲಕ್ಷ ಜನರು ಮೃತಪಡುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ಹೇಳಿದರು. “ಈ ಎರಡು ಅಂಶಗಳು ನಮ್ಮ ಇಡೀ ಆರೋಗ್ಯ ವ್ಯವಸ್ಥೆಯ ಪ್ರಯತ್ನಗಳನ್ನು ನಿರರ್ಥಕಗೊಳಿಸುತ್ತಿವೆ” ಎಂದರು.

ಸರ್ ಎಂ. ವಿಶ್ವೇಶ್ವರಯ್ಯ ಅವರ ಪರಂಪರೆಯನ್ನು ಉಲ್ಲೇಖಿಸಿದ, ಡಾ. ಮಂಜುನಾಥ್ ಅವರು, ಎಂಜಿನಿಯರ್‌ಗಳನ್ನು “ಜೀವನವನ್ನು ಪರಿವರ್ತಿಸುವ ಸೃಷ್ಟಿಕರ್ತರು” ಎಂದು ಕರೆದರು. ಒಳಚರಂಡಿ ಸಂಸ್ಕರಣೆ, ಅಂತರ್ಜಲ ಮಾಲಿನ್ಯ ಮತ್ತು ಕೆರೆಗಳ ಪುನರುಜ್ಜೀವನದಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಳತ್ವ ವಹಿಸಬೇಕೆಂದು ಅವರನ್ನು ಒತ್ತಾಯಿಸಿದರು. “ನೀವು ಒಳಚರಂಡಿ ನಿರ್ಮಿಸದ ಹೊರತು ರಸ್ತೆಗಳನ್ನು ಮಾಡಬೇಡಿ. ಒಳಚರಂಡಿ ನೀರನ್ನು ಬಿಡುಗಡೆ ಮಾಡುವ ಮೊದಲು ಸಂಸ್ಕರಿಸದ ಹೊರತು, ಬೆಂಗಳೂರಿನ ಕೆರೆಗಳು ಮತ್ತು ಅಂತರ್ಜಲವು ವಿಷಪೂರಿತವಾಗುತ್ತಲೇ ಇರುತ್ತದೆ” ಎಂದರು.
ಮೌಲ್ಯಗಳ ಬಗ್ಗೆ ವಿವರಿಸಿದ ಅವರು, ಸರ್ ಎಂವಿಶ್ವೇಶ್ವರಯ್ಯ ಅವರ ಐದು ತತ್ವಗಳಾದ – ಸಮಗ್ರತೆ, ಬುದ್ಧಿವಂತಿಕೆ, ಏಕೀಕರಣ, ವಿಕಸನ ಮತ್ತು ನಾವೀನ್ಯತೆ – ಎಂಜಿನಿಯರಿಂಗ್ ಮತ್ತು ಆರೋಗ್ಯ ರಕ್ಷಣೆ ಎರಡಕ್ಕೂ ಕಾಲಾತೀತ ತತ್ವಗಳಾಗಿವೆ ಎಂದು ಸೂಚಿಸಿದರು. ಖಾಸಗಿ ಸಂಸ್ಥೆಗಳು ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ, ಹಸ್ತಕ್ಷೇಪ ಮಾಡದಿರುವುದು ಬೆಳವಣಿಗೆಗೆ ಉತ್ತಮ ಪ್ರೋತ್ಸಾಹ ಎಂದರು.
“ಸರ್ ಎಂ ವಿಶ್ವೇಶ್ವರಯ್ಯನಂಥ ನಾಯಕರಿಂದ ಸ್ಫೂರ್ತಿ ಬರುತ್ತದೆ, ಆದರೆ ದೃಢನಿಶ್ಚಯ ನಮ್ಮ ಜವಾಬ್ದಾರಿಯಾಗಿದೆ. ಎಂಜಿನಿಯರ್‌ಗಳು ಮತ್ತು ಆರೋಗ್ಯ ವೃತ್ತಿಪರರು ಮೂಲಸೌಕರ್ಯವನ್ನು ಮಾತ್ರವಲ್ಲದೆ, ಆರೋಗ್ಯಕರ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಭಾರತವನ್ನು ನಿರ್ಮಿಸಲು ಕೈಜೋಡಿಸಬೇಕು” ಎಂದು ಮನವಿ ಮಾಡಿಕೊಂಡರು.
ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ತಮ್ಮ ಮುಖ್ಯ ಭಾಷಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಹೇಗೆ ಸ್ಫೂರ್ತಿಯಾಗಿ ಮುಂದುವರೆದಿದ್ದಾರೆ ಎಂದರು, ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅವರ ಮಾರ್ಗದರ್ಶಿ ತತ್ವಗಳನ್ನು ಅಷ್ಟೇನೂ ಅನುಸರಿಸುವುದಿಲ್ಲ. ಮಹಾನ್ ನಾಯಕರು, ತತ್ವಜ್ಞಾನಿಗಳು, ವಿಜ್ಞಾನಿಗಳನ್ನು ಗುರುತಿಸಿದ ಯುಗದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಇದ್ದರು ಎಂದರು.
ಐಎಎಸ್ ಅಧಿಕಾರಿ ಶ್ರೀ ಸೋಮಶೇಖರ್ ಅವರು ಸರ್ ಎಂವಿಶ್ವೇಶ್ವರಯ್ಯ ಅವರ ಸಾಧನೆಗಳ ಬಗ್ಗೆ ಮಾತನಾಡಿದರು.
ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅವರು ಎಂಜಿನಿಯರ್‌ಗಳ ದಿನದಂದು ಎಫ್‌ಕೆಸಿಸಿಐ ನೀಡುವ ಪ್ರಶಸ್ತಿ ಬಗ್ಗೆ ಮಾತನಾಡಿದರು. ಎಫ್‌ಕೆಸಿಸಿಐ ಚುನಾಯಿತ ಅಧ್ಯಕ್ಷೆ ಉಮಾ ರೆಡ್ಡಿ ಅವರು ಹಾಜರಿದ್ದರು.
BIG NEWS: 15 ವರ್ಷ ಮೀರಿದ ‘ಸರ್ಕಾರಿ ವಾಹನ’ಗಳನ್ನು ನಾಶಪಡಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಆದೇಶ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ








