ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಎಲ್ಲಾ ವಾರ್ಡ್ ಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಬಿಬಿಎಂಪಿ ವೆಬ್ ಸೈಟ್ ಲಿಂಕ್ https://apps.bbmpgov.in/ganesh2025/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಪ್ರಮುಖ ಕಲ್ಯಾಣಿಗಳಲ್ಲಿ ಅಗತ್ಯ ವ್ಯವಸ್ಥೆ:
ಪ್ರತಿ ವರ್ಷದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳಾದ ಸ್ಯಾಂಕಿಕೆರೆ, ಹಲಸೂರು ಕರೆ, ಯಡಿಯೂರು ಕೆರೆ ಹಾಗೂ ಹೆಬ್ಬಾಳ ಕೆರೆ ಹಾಗೂ ಇತರೆ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್‌ಗಳ ಅಳವಡಿಕೆ, ನುರಿತ ಈಜುಗಾರರ/ಜೀವ ರಕ್ಷಕರ ನಿಯೋಜನೆ, ಸಿಸಿಟಿವಿ ಅಳವಡಿಕೆ, ವಿದ್ಯುತ್ ದೀಪಗಳ ಸೌಲಭ್ಯ ಹಾಗೂ ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಿದ ವೇಳೆ ಸಂಗ್ರಹವಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್ ಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಯಡಿಯೂರು ಕೆರೆ ಕಲ್ಯಾಣಿಯಲ್ಲಿ ವಿಸರ್ಜನೆಗೆ ವ್ಯವಸ್ಥೆ:
ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪೈಕಿ ದಿನಾಂಕ: 27-08-2025 ರಿಂದ 07-09-2025 ರವರೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಅಥವಾ ಮಣ್ಣಿನಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಯಡಿಯೂರು ಕೆರೆಯಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಲಸೂರು ಕೆರೆ ಅಂಗಳದ ಕಲ್ಯಾಣಿ:
ಹಲಸೂರು ಕೆರೆಯ ಕಲ್ಯಾಣಿಯಲ್ಲಿ 27-08-2025 ರಿಂದ 30-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಹೂಳೆತ್ತುವ ಕಾರ್ಯವನ್ನು 01-09-2025, 02-09-2025, 08-09-2025 ಹಾಗೂ 09-09-2025 ರಂದು ನಿರ್ವಹಿಸುವ ಕಾರಣ ಯಾವುದೇ ರೀತಿಯ ಮೂರ್ತಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ.
ಹೆಬ್ಬಾಳ ಕೆರೆ ಅಂಗಳದ ಕಲ್ಯಾಣಿ:
ಹೆಬ್ಬಾಳ ಕೆರೆ ಅಂಗಳದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ 10-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿ:
ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 04-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ
ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಪ್ರಮುಖ ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ