ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಪತಿಯ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಕರುಣಾಜನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿ ಎಂಬ ಸುಂದರ ಬದುಕಿನ ಕನಸು ಹೊತ್ತು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವತಿ, ಕೊನೆಗೆ ಪತಿ ಹಾಗೂ ಅತ್ತೆಯ ಮಾನಸಿಕ ಹಿಂಸೆ ತಾಳಲಾರದೆ ಕಂಪ್ಲಿ ಪಟ್ಟಣದ ತನ್ನ ತವರು ಮನೆಯಲ್ಲಿಯೇ ಜೀವನ ಕೊನೆಗಾಣಿಸಿಕೊಂಡಿದ್ದಾರೆ.
ಮೃತ ದುರ್ದೈವಿಯನ್ನು ಐಶ್ವರ್ಯ ಎಂದು ಗುರುತಿಸಲಾಗಿದೆ. ಇವರು ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಕುಮಾರ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತಾದರೂ, ಬೆಂಗಳೂರಿನಲ್ಲಿ ಸಂಸಾರ ಹೂಡಿದ ಕೆಲವೇ ದಿನಗಳಲ್ಲಿ ಐಶ್ವರ್ಯ ಅವರ ಪಾಲಿಗೆ ವೈವಾಹಿಕ ಜೀವನ ನರಕಸದೃಶವಾಗಿ ಮಾರ್ಪಟ್ಟಿತ್ತು ಎಂದು ತಿಳಿದುಬಂದಿದೆ.
ಆರೋಪಗಳ ಪ್ರಕಾರ, ಮದುವೆಯಾದ ಮೊದಲ ದಿನದಿಂದಲೂ ಐಶ್ವರ್ಯ ಅವರಿಗೆ ಅತ್ತೆಯಿಂದ ನಿರಂತರವಾಗಿ ಮಾನಸಿಕ ಕಿರುಕುಳ ಎದುರಾಗುತ್ತಿತ್ತು. ಸಣ್ಣಪುಟ್ಟ ವಿಷಯಗಳಿಗೂ ಅತ್ತೆ ಹಿಂಸೆ ನೀಡುತ್ತಿದ್ದರು. ಇಂತಹ ಕಷ್ಟದ ಸಮಯದಲ್ಲಿ ಪತ್ನಿಯ ಬೆಂಬಲಕ್ಕೆ ನಿಂತು ಸಾಂತ್ವನ ಹೇಳಬೇಕಾಗಿದ್ದ ಪತಿ ಪ್ರದೀಪ್ ಕುಮಾರ್ ಕೂಡ ತಾಯಿಯ ಪರ ವಹಿಸಿ, ಪತ್ನಿಗೆ ಮಾನಸಿಕವಾಗಿ ಮತ್ತಷ್ಟು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನನ್ವಯ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡಿರುವ ಕಂಪ್ಲಿ ಪೊಲೀಸರು, ಐಶ್ವರ್ಯ ಅವರ ಆತ್ಮಹತ್ಯೆಗೆ ಕಾರಣರಾದ ಪತಿ ಪ್ರದೀಪ್ ಕುಮಾರ್ ಹಾಗೂ ಅತ್ತೆಯನ್ನು ಈಗಾಗಲೇ ಬಂಧಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.








