ಚಾಮರಾಜನಗರ (ಹೆಚ್.ಡಿ.ಕೋಟೆ): ಗೇಯೋ ಎತ್ತಿಗೆ ಹುಲ್ಲು ಹಾಕ್ತೀರೋ…ಕಳ್ ಎತ್ತಿಗೆ ಹುಲ್ಲು ಹಾಕ್ತೀರೋ ಯೋಚಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಹೆಚ್.ಡಿ.ಕೋಟೆಯಲ್ಲಿ ನಡೆದ ಬೃಹತ್ ಜನಧ್ವನಿ-2 ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಜನತೆ ಬರಗಾಲಕ್ಕೆ ತುತ್ತಾಗಿದ್ದಾರೆ. ನಮ್ಮ ಜನ ಕಟ್ಟಿದ ತೆರಿಗೆಯಲ್ಲಿನ ಪಾಲು ನಮಗೆ ವಾಪಾಸ್ ಕೊಡಿ, ಬರಗಾಲಕ್ಕೆ ನಮ್ಮ ಪಾಲಿನ ಅನುದಾನ ಕೊಡಿ ಅಂತ ನಾವು ಪತ್ರ ಬರೆದು ಹೋರಾಟ ಮಾಡಿದರೂ ಮೋದಿ ಸರ್ಕಾರ ನಮ್ಮ ಪಾಲಿನ ನಯಾಪೈಸೆ ಕೊಡಲಿಲ್ಲ. ಇಂಥವರಿಗೆ ಮತ ಹಾಕಿದ್ರೆ ಆ ಮತಕ್ಕೆ ಗೌರವ ಬರುತ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದ ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ಆಡಿಸ್ತಾರೆ. ಮೋದಿ ರಾಜ್ಯಕ್ಕೆ ಮಾಡಿದ ಅನ್ಯಾಯ ಸರಿ, ಬರಗಾಲ ಬಂದ್ರೂ ಮೋದಿ ಅನುದಾನ ಕೊಡದೇ ಇದ್ದದ್ದೇ ಸರಿ, ಮೋದಿಯವರು ಪೆಟ್ರೋಲ್-ಡೀಸೆಲ್-ಗ್ಯಾಸ್-ರಸಗೊಬ್ಬರ ಬೆಲೆಯನ್ನು ಹೆಚ್ಚಿಸಿದ್ದೇ ಸರಿ…ಎಂದು ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ತೂಗುತ್ತಿದ್ದಾರೆ. ಇಂಥವರಿಗೆ ನಿಮ್ಮ ಮತ ಹೋಗಬೇಕಾ ಎಂದು ಕುಟುಕಿದರು.
ನರೇಂದ್ರ ಮೋದಿಯವರು ಹೇಳಿದ್ದರಲ್ಲಿ ಒಂದೇ ಒಂದನ್ನೂ ಜಾರಿ ಮಾಡಿಲ್ಲ. ಬದಲಿಗೆ ಜನರ ಮುಂದೆ ಆಶ್ವಾಸನೆ ಕೊಟ್ಟು ಅದಕ್ಕೆ ಉಲ್ಟಾ ನಡೆದುಕೊಂಡಿದ್ದಾರೆ.
ವಿದೇಶದಿಂದ ಕಪ್ಪು ಹಣ ತರಲಿಲ್ಲ, ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಆದರೆ ಹೊಸ ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಕೆಲಸಗಳೂ ಬಂದ್ ಆದ್ವು. ಇಂಥವರಿಗೆ ನಿಮ್ಮ ಕೇಳುವ ಮುಖ ಇದೆಯಾ ಎಂದು ಪ್ರಶ್ನಿಸಿದರು.
ಕೊಟ್ಟ ಮಾತು ಈಡೇರಿಸಿದ್ದೇವೆ. ಮುಂದೆಯೂ ಈಡೇರಿಸ್ತೀವಿ ನಮ್ಮ ಕಾಂಗ್ರೆಸ್ ಸರ್ಕಾರ ನಿಮಗೆ ಕೊಟ್ಟ ಮಾತು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದಿದೆ. ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ.
ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನರ ಬದುಕಿನ ಸಂಕಷ್ಟಗಳಿಗೆ ಸ್ಪಂದಿಸುವ ಉದ್ಸೇಶದಿಂದ ಬೇಗ ಬೇಗ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಇದರಿಂದ ಪ್ರತೀ ಕುಟುಂಬಕ್ಕೆ ತಿಂಗಳಿಗೆ 5 ರಿಂದ 6 ಸಾವಿರ ಉಳಿತಾಯ ಆಗುತ್ತದೆ ಎಂದರು.
ಅನಿಲ್ ಚಿಕ್ಕಮಾದು ಕೇಳಿದ್ದೆಲ್ಲಾ ಕ್ಷೇತ್ರಕ್ಕೆ ಕೊಡ್ತೀನಿ : ನೀವು ಅನಿಲ್ ಚಿಕ್ ಮಾದು ಅವರಿಗೆ ಶಕ್ತಿ ತುಂಬಿ. ನಮ್ಮ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಅನಿಲ್ ಅವರು ಕೇಳಿದ್ದನ್ನೆಲ್ಲಾ ಕೊಡಲು ನಾವು ಬದ್ದರಾಗಿದ್ದೇವೆ ಎಂದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿಲ್ಲೆಯ ಶಾಸಕರುಗಳಾದ ದರ್ಶನ್ ದ್ರುವನಾರಾಯಣ್, ಗಣೇಶ್ ಮಹದೇವ್ ಪ್ರಸಾದ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಕೇಶವಮೂರ್ತಿ, ಡಿಸಿಸಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿ ಹಲವು ಮಂದಿ ಜಿಲ್ಲಾ, ತಾಲ್ಲೂಕು, ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.