ನವದೆಹಲಿ : ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ ಅವರು ಕನ್ನಡಿಗರ ಸ್ವತ್ತು. ಅವರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಗೌರವವಿದ್ದರೆ ಬೆಂಗಳೂರಿನಲ್ಲಿ ಅವರು ಕಟ್ಟಿಸಿದಂತಹ ಕೆರೆಗಳನ್ನು ರಕ್ಷಣೆ ಮಾಡಲಿ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನವ ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಂತರ ಸುಧೀಗಾರರೊಂದಿಗೆ ಮಾತನಾಡಿದ ಅವರು, ಮಹಾಪುರುಷರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಹೃದಯದಲ್ಲಿ ಗೌರವ ಎನ್ನುವುದು ಇದ್ದರೆ ಮೊದಲು ಅವರು ಕಟ್ಟಿಸಿರುವ ಕೆರೆಗಳನ್ನು ರಕ್ಷಣೆ ಮಾಡಲಿ ಎಂದರು.
ರಾಜ್ಯ ಸರ್ಕಾರ ಜಯಂತಿಗೆ ಕರೆಯದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ನನ್ನ ಹೆಸರು ಹಾಕಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆ ಎಂದು ಹೇಳಿದರು.
ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಕೆಂಪೇಗೌಡರು. ಅವರು ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಆ ಕೆರೆಗಳನ್ನು ಕಾಪಾಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಸಹ ಆ ನಗರಕ್ಕೆ ಕೊಡುಗೆ ಕೊಟ್ಟಿದ್ದೇನೆ. ಕೆಂಪೇಗೌಡರ ಹಿರಿಮೆಗೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕೋ ಹಾಗೆ ನಡೆದುಕೊಂಡಿದ್ದೇನೆ ಎಂದರು.