ಬೆಂಗಳೂರು: ಏರುತ್ತಿರುವ ವಾಯು ಮಾಲಿನ್ಯದ ( air pollution ) ಸಮಸ್ಯೆಯನ್ನು ಪರಿಹರಿಸಲು ಬಹು-ಶಿಸ್ತೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ( Minister Dr K Sudhakar ) ಅವರು ಕರೆ ನೀಡಿದ್ದಾರೆ.
ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ‘ಸದ್ದಿಲ್ಲದ ಸಾವು’(ಸೈಲೆಂಟ್ ಡೆತ್)ಗಳ ಕುರಿತು ಪ್ರಸ್ತಾಪಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಭಾರತ ಶುದ್ಧ ಗಾಳಿ ಶೃಂಗಸಭೆ 2022(#ಐಸಿಎಎಸ್2022)ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರವಾದ ಕಾಯಿಲೆಗಳ ಪ್ರಕರಣಗಳು ಹೆಚ್ಚಿವೆ. ಇದಕ್ಕೆ ನಗರ ಪ್ರದೇಶಗಳಲ್ಲಿನ ಅತ್ಯಧಿಕ ಮಟ್ಟದ ಮಾಲಿನ್ಯವೇ ಕಾರಣ ಎಂದರು.
ನಗರಗಳಲ್ಲಿ ಶ್ವಾಸಕೋಶದ ಸೋಂಕು ಪ್ರಮಾಣವೂ ಹೆಚ್ಚಿದೆ. ದೇಶಾದ್ಯಂತ ಶ್ವಾಸಕೋಶ ಸಂಬಂಧಿ ಕಾಯಿಲೆ(ಸಿಒಪಿಡಿ) ಪ್ರಮಾಣ ಏರಿಕೆಯಾಗುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ವಾಯುಮಾಲಿನ್ಯದಿಂದ ಸದ್ದಿಲ್ಲದೇ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಾವು ವಾಯುಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಲು ಬಹುಶಿಸ್ತೀಯ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ಭವಿಷ್ಯದ ತಲೆಮಾರು ಖಂಡಿತಾ ನಮ್ಮನ್ನು ಶಪಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಾಯುಮಾಲಿನ್ಯಕ್ಕೂ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಮಹತ್ವ ಪಡೆದಿದೆ.
ವಾಯು ಮಾಲಿನ್ಯ ಅಧ್ಯಯನ ಕೇಂದ್ರ(ಸಿಎಪಿಎಸ್)ವು ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್, ಟೆಕ್ನಾಲಜಿ ಆಂಡ್ ಪಾಲಿಸಿ(ಸಿಎಸ್ ಟಿಇಪಿ)ಯಲ್ಲಿ ಆಯೋಜಿಸಲಾಗಿದ್ದ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಭಾರತದ ಪ್ರಮುಖ ಕಾರ್ಯಕ್ರಮವಾದ ಭಾರತ ಶುದ್ಧ ಗಾಳಿ ಶೃಂಗಸಭೆ(ಐಸಿಎಎಸ್)ಯನ್ನು ಮಂಗಳವಾರ ಸಚಿವರಾದ ಕೆ. ಸುಧಾಕರ್, ಪರಿಸರ ಹೋರಾಟಗಾರ ಮತ್ತು ಸಂಗೀತಗಾರ ರಿಕಿ ಕೇಜ್ ಮತ್ತು ಕವಯಿತ್ರಿ ಮತ್ತು ತಮಿಳುನಾಡು ಸಂಸದರಾದ ಕೆ. ಸುಮತಿ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಮೂಲಕ ಪರಿಸರ ಹೋರಾಟಗಾರರು, ನೀತಿ ನಿರೂಪಕರು, ಕೈಗಾರಿಕೋದ್ಯಮಿಗಳು ಮತ್ತು ವಿದ್ಯಾರ್ಥಿಗಳನ್ನು ಐಸಿಎಎಸ್ ಒಂದೇ ಸೂರಿನಡಿಗೆ ತಂದಿದ್ದು, ಇಲ್ಲಿ ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಕಿ ಕೇಜ್ ಅವರು, ಹವಾಮಾನ ಬದಲಾವಣೆ ಎನ್ನುವುದು ಭವಿಷ್ಯದಲ್ಲಿ ಸಂಭವಿಸಲಿದೆ ಎನ್ನುವಂಥ ಅಸ್ಪಷ್ಟವಾದ ವಿದ್ಯಮಾನವಲ್ಲ. ಇಂದು ಇಲ್ಲಿ ಕುಳಿತು ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ಜಗತ್ತಿನ ಮತ್ತೊಂದು ಬದಿಯಲ್ಲಿ ಕುಳಿತಿರುವ ಜನರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿರುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಗಳ ಬಳಕೆ ತ್ಯಜಿಸುವುದು, ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು ಹೀಗೆ ನಮ್ಮ ದೈನಂದಿನ ಬದುಕಿನಲ್ಲಿ ನಾವು ಮಾಡುವಂಥ ಸಣ್ಣಪುಟ್ಟ ಹಂತಹಂತವಾದ ಬದಲಾವಣೆಗಳ ಮೂಲಕ ನಾವು ದೊಡ್ಡ ಮಟ್ಟದ ಅರ್ಥಪೂರ್ಣ ಪರಿವರ್ತನೆಯನ್ನು ತರಬಹುದು. ನನ್ನ ಪ್ರಕಾರ, ಹವಾಮಾನ ಬದಲಾವಣೆಯು ಇಂದಿನ ಸಂವಹನ ಸಮಸ್ಯೆಯಾಗಿದೆ- ನಾವು ಜನರನ್ನು ಭಾವನಾತ್ಮಕವಾಗಿ ತಲುಪಬೇಕು. ಇದು ಈಗ ಕೇವಲ ಜಾಗೃತಿ ಅಥವಾ ತಿಳಿವಳಿಕೆಯ ಪ್ರಶ್ನೆಯಾಗಿ ಉಳಿದಿಲ್ಲ. ಬದಲಾಗಿ, ನಾವು ಆ ತಿಳಿವಳಿಕೆ ಮತ್ತು ಜಾಗೃತಿಯನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬ ಬಗ್ಗೆ ಯೋಚಿಸಬೇಕು. ಅದುವೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ಕೀಲಿಕೈ ಎಂದು ಹೇಳಿದರು.
ಟಿ. ಸುಮತಿ ಅವರು ಮಾತನಾಡಿ, ಈಗ ವಾಯುಮಾಲಿನ್ಯವು ಕೇವಲ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿ ಉಳಿದಿಲ್ಲ. ಅದು ಈಗ ಆರೋಗ್ಯ ಸಮಸ್ಯೆಯೂ ಹೌದು. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಬದಲಾವಣೆಯು ನಮ್ಮ ದೈನಂದಿನ ಬದುಕಿನಲ್ಲಿ ಸಂಪರ್ಕ ಹೊಂದಿವೆ. ಇವರೆಡಕ್ಕೂ ಪರಿಹಾರವನ್ನು ನಾವು ಸುಸ್ಥಿರತೆಯ ಮೂಲಕ ಮತ್ತು ಸಮಗ್ರ ದೃಷ್ಟಿಯಿಂದ ಪ್ರಾಯೋಗಿಕವಾಗಿ ಕಂಡುಕೊಳ್ಳಬೇಕು ಎಂದರು.
ಎರಡನೇ ದಿನದ ಸೆಷನ್ ನಲ್ಲಿ ಮಾತನಾಡಿದ ಕೆಎಸ್ ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು, ಪ್ರಸ್ತುತ ನಾವು ಅನುಭವಿಸುತ್ತಿರುವ ಮಾಲಿನ್ಯ ಮತ್ತು ಹವಾಮಾನ ವೈಪರೀತ್ಯವು ನಮ್ಮ ನಿರ್ಲಕ್ಷ್ಯದಿಂದಲೇ ಆಗಿರುವಂಥದ್ದು. ನಮ್ಮ ನಮ್ಮ ಕುಟುಂಬದ ವಿಚಾರ ಬಂದಾಗ ನಾವು ತುರ್ತಾಗಿ ಪ್ರತಿಕ್ರಿಯಿಸುತ್ತೇವೆ. ಅದೇ ರೀತಿ, ವಾಯುಮಾಲಿನ್ಯ ಮತ್ತು ಹವಾಮಾನ ವೈಪರೀತ್ಯದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ಕೂಡ ಸ್ಥಳೀಕರಿಸಬೇಕು ಮತ್ತು ಸ್ಥಳೀಯ ಪರಿಹಾರಗಳ ಮೂಲಕವೇ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಇದೇ ವೇಳೆ ಮಾತನಾಡಿದ ಸಿಎಪಿಎಸ್ ಮುಖ್ಯಸ್ಥರಾದ ಡಾ. ಪ್ರತಿಮಾ ಸಿಂಗ್, ವಾಯು ಮಾಲಿನ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಮೊದಲು ಹವಾಮಾನ ವೈಪರೀತ್ಯವನ್ನು ಅರ್ಥಮಾಡಿಕೊಳ್ಳಬೇಕು. ಐಸಿಎಎಸ್ 2022 ನಲ್ಲಿ ನಾವು, ವಾಯುಮಾಲಿನ್ಯ ಮತ್ತು ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ಹೇಗೆ ಒಮ್ಮುಖವಾಗಿಸಬೇಕು ಎಂಬ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಹವಾಮಾನದ ಕನ್ನಡಕದಿಂದ ವಾಯುಮಾಲಿನ್ಯವನ್ನು ನೋಡಿದರೆ ಮಾತ್ರ ನಮಗೆ ಸುರಕ್ಷಿತ ಮತ್ತು ಸುಸ್ಥಿರ ಪರಿಸರಕ್ಕೆ ಒಂದು ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮಗೆ ಕಾರ್ಯಗತಗೊಳಿಸಬೇಕಾದ ಪರಿಹಾರಗಳು ಬೇಕೆಂದರೆ ಒಂದು ಸೀಮಿತ ಪರಿಧಿಯೊಳಗೆ ಕೆಲಸ ಮಾಡುವುದನ್ನು ಬಿಡಬೇಕು. ವಿವಿಧ ಸಮುದಾಯಗಳನ್ನು ಒಂದುಗೂಡಿಸುವ ಮೂಲಕ ನಾವು ತಿಳಿವಳಿಕೆಯಲ್ಲಿರುವ ಅಂತರವನ್ನು ಕಡಿಮೆ ಮಾಡಿ, ಕಾರ್ಯಗತಗೊಳಿಸಬಹುದಾದ ಪರಿಹಾರವನ್ನು ಕಂಡುಕೊಳ್ಳಲು ನಾವು ಬಯಸುತ್ತೇವೆ ಎಂದರು.
ಐಸಿಎಎಸ್ ಮೂಲಕ ಸಿಎಸ್ ಟಿಇಪಿ ಸಂಸ್ಥೆಯು ಶೈಕ್ಷಣಿಕ, ನಾಗರಿಕ ಸಮಾಜ, ಕೈಗಾರಿಕೆ ಮತ್ತು ಸರ್ಕಾರ ಹೀಗೆ ವಿಭಿನ್ನ ಸಮುದಾಯಗಳ ಸದಸ್ಯರನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸುವ ಮತ್ತು ಬೆಳೆಸುವಂಥ ವೇದಿಕೆಯನ್ನು ಸೃಷ್ಟಿಸುತ್ತಿದೆ. ಇದರ ಮೂಲಕ ಸಂಶೋಧನೆಯ ಮಾಹಿತಿ ನೀಡುವ, ಉತ್ತಮ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಹಭಾಗಿತ್ವದ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಲಿದೆ ಎಂದು ಸಿಎಸ್ ಟಿಇಪಿ ಕಾರ್ಯಕಾರಿ ನಿರ್ದೇಶಕ ಡಾ. ಜೈ ಅಸುಂದಿ ಹೇಳಿದರು.