ನವದೆಹಲಿ: ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪ್ಯಾಕ್ (I-PAC) ನಿರ್ದೇಶಕ ವಿನೇಶ್ ಚಂದೇಲ್ ಅವರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ಒಪ್ಪಿಸಿದೆ.
ಇಡೀ ರಾತ್ರಿ ನಡೆದ ವಿಚಾರಣೆ: ಎಪ್ರಿಲ್ 13ರ ತಡರಾತ್ರಿ ಇಡಿ ಅಧಿಕಾರಿಗಳು ಚಂದೇಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಸುದೀರ್ಘ ವಾದ-ಪ್ರತಿವಾದಗಳು ಇಡೀ ರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಶೆಫಾಲಿ ಬರ್ನಾಲಾ ಟಂಡನ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಏನಿದು ಪ್ರಕರಣ? ದೆಹಲಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಕೈಗೆತ್ತಿಕೊಂಡಿದೆ. ತನಿಖಾ ಸಂಸ್ಥೆಯ ಪ್ರಕಾರ, ಚಂದೇಲ್ ಅವರು ‘ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್’ ಕಂಪನಿಯಲ್ಲಿ ಶೇ. 33ರಷ್ಟು ಪಾಲನ್ನು ಹೊಂದಿದ್ದು, ಈ ಸಂಸ್ಥೆಯ ಮೂಲಕ ಹಣ ಅಕ್ರಮ ವರ್ಗಾವಣೆ ನಡೆದಿರುವ ಶಂಕೆಯಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಐ-ಪ್ಯಾಕ್ ನಿರ್ವಹಿಸುತ್ತಿದೆ.
ತನಿಖೆಗೆ ಮಮತಾ ಬ್ಯಾನರ್ಜಿ ಅಡ್ಡಿ? ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಐ-ಪ್ಯಾಕ್ ಮತ್ತೊಬ್ಬ ನಿರ್ದೇಶಕ ಪ್ರತೀಕ್ ಜೈನ್ ಅವರ ಕೋಲ್ಕತ್ತಾ ನಿವಾಸದ ಮೇಲೆ ಕಲ್ಲಿದ್ದಲು ಹಗರಣದ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್ ಕಚೇರಿಗೆ ತಲುಪಿ ತನಿಖೆಗೆ ಅಡ್ಡಿಪಡಿಸಿದ್ದಾರೆ ಮತ್ತು ಕೆಲವು ಪ್ರಮುಖ ದಾಖಲೆ ಹಾಗೂ ಡಿಜಿಟಲ್ ಪುರಾವೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ. ಆದರೆ ಮಮತಾ ಬ್ಯಾನರ್ಜಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ.
ವಿನೇಶ್ ಚಂದೇಲ್ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಮೂಲಕ ಈ ಹಗರಣದ ಮೂಲವನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಕಾರ್ಮಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನೋಯ್ಡಾ ಹಿಂಸಾಚಾರದ ಬೆನ್ನಲ್ಲೇ ಕನಿಷ್ಠ ವೇತನ ಭರ್ಜರಿ ಏರಿಕೆ!








