ಬೆಳಗಾವಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸ್ವಲ್ಪ ತಣ್ಣಗಾಗಿತ್ತು ಆದರೆ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಅಚ್ಚರಿ ಹೇಳಿಕೆ ಒಂದನ್ನು ನೀಡಿದ್ದಾರೆ. ಕರ್ನಾಟಕ ಸಿಎಂ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು, ಆದರೆ ಅರ್ಜಿಯೇ ಕರೆಯುವುದಿಲ್ಲವಲ್ಲ ಎಂದು ಪರೋಕ್ಷವಾಗಿ ಗೃಹ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ನಾವು ಏನೇನೋ ಆಸೆ ಇಟ್ಟುಕೊಳ್ಳಬಹುದು. ಆದರೆ, ತೀರ್ಮಾನ ಮಾಡೋದು ಹೈಕಮಾಂಡ್. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು. ಆದರೆ, ಅರ್ಜಿಯನ್ನೇ ಕರೆಯೋದಿಲ್ಲವಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾವೂ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಇಂಗಿತ ಹೊರಹಾಕಿದರು.
ಶಾಸಕರಿಗೆ ಮಂತ್ರಿ ಆಗುವ ಆಸೆ ಇದ್ದರೆ, ಗೃಹ ಸಚಿವರಿಗೆ ಸಿಎಂ ಆಗುವ ಆಸೆ ಇಲ್ಲವೇ ಎಂದು ಪ್ರಶ್ನೆ ಕೇಳಿದಾಗ, ನನಗೆ ಆಸೆ ಇದೆ ಅಂತಾ ನಿಮಗೆ ಯಾರು ಹೇಳಿದರು? ನಮ್ಮ ಪಕ್ಷದಲ್ಲಿ ಏನೇ ತೀರ್ಮಾನ ಆಗಬೇಕಾದರೂ, ಅದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ, ಯಾರಿಗೆ ಅರ್ಹತೆ ಇದೆ, ಯಾರಿಗೆ ಅರ್ಹತೆ ಇಲ್ಲ ಎಂಬುದು ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.








