ಬಾಗಲಕೋಟೆ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳನ್ನು ಯಾಕೆ ಪ್ರಾಸಿಕ್ಯೂಷನ್ಗೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.ಇದೀಗ ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದು, ನಾನು ನಿರಪರಾಧಿ, ಎಲ್ಲ ತನಿಖೆಗೂ ಸಿದ್ದನಿದ್ದೇನೆ. ಪ್ರಕರಣ ‘CBI’ ತನಿಖೆಗೂ ಬೇಕಿದ್ದರೆ ಕೊಡಲಿ ಎಂದು ತಿಳಿಸಿದರು.
ಈ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022 ರಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಗ ಕೈಗಾರಿಕೆ ಇಲಾಖೆ ಅಧಿಕಾರಿಗಳು ಐದು ನಿಮಿಷದ ತ್ರಿಡಿ ಪ್ರೊಮೊ ವಿಡಿಯೋ ಮಾಡೋದಕ್ಕೆ ಒಂದು ಕಂಪನಿಗೆ ಗುತ್ತಿಗೆ ನೀಡಿದ್ದರು.
ಅದರ ಬಜೆಟ್ ನಾಲ್ಕುವರೆ ಕೋಟಿ ರೂ. ಆಗಿತ್ತು. ಇದು ನನ್ನ ಗಮನಕ್ಕೆ ಬಂದಿದ್ದೇ ತಡ ನಾನೆ ಅದನ್ನು ತಡೆದೆ. ಐದು ನಿಮಿಷದ ವಿಡಿಯೋ ಮಾಡೋದಕ್ಕಾಗಿ ನಾಲ್ಕುವರೆ ಕೋಟಿ ರೂ. ಇದು ಬಹಳ ಹೆಚ್ಚಾಯಿತು. ಕೂಡಲೆ ರದ್ದು ಮಾಡಿ ಎಂದು ಕೈಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದೆ ಎಂದರು.
ಅಂದು ನಾನು ಟೆಂಡರ್ ರದ್ದು ಮಾಡಿದ್ದಕ್ಕೆ ಜಾಹೀರಾತು ಕಂಪನಿಯವರು ಕೋರ್ಟ್ ಮೊರೆ ಹೋದರು. ಕೋರ್ಟ್ ಏಕ ಸದಸ್ಯ ಪೀಠ ಅವರು ಈಗಾಗಲೇ ನಿಮ್ಮ ಆದೇಶದ ಪ್ರಕಾರ ವಿಡಿಯೋ ತಯಾರಿಸಿದ್ದಾರೆ. ಅದಕ್ಕಾಗಿ ಹಣ ಪಾವಿತಿಸಿ ಅಂತ ಹೇಳಿತ್ತು. ನಾವು ಮತ್ತೆ ಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆವು. ಆಗ ದ್ವಿಸದಸ್ಯ ಪೀಠ ಸಚಿವರು ಹೇಳಿದ್ದು ಸರಿ ಇದೆ. ಐದು ನಿಮಿಷದ ವಿಡಿಯೋ ಚಿತ್ರೀಕರಣಕ್ಕೆ ನಾಲ್ಕುವರೆ ಕೋಟಿ ರೂ. ತೀರಾ ಹೆಚ್ಚಾಯಿತು ಎಂದು ನನ್ನ ಪತ್ರ ಉಲ್ಲೇಖ ಮಾಡಿ ಆದೇಶ ನೀಡಿದೆ.
ಅಲ್ಲಿಗೆ ಅದನ್ನು ಕೈ ಬಿಡಲಾಗಿದೆ. ಆದರೆ ಅದನ್ನೇ ಇಟ್ಕೊಂಡುಸಿಎಂ, ಡಿಸಿಎಂ, ಸಚಿವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ನನಗೆ ಇದುವರೆಗೂ ರಾಜಭವನದಿಂದ ಆಗಲಿ, ಯಾವುದೇ ತನಿಖಾ ಸಂಸ್ಥೆಗಳಿಂದಾಗಲಿ ಒಂದೇ ಒಂದು ನೊಟೀಸ್ ಬಂದಿಲ್ಲ. ಯಾರು ವಿಚಾರಣೆಗೆ ಕರೆದಿಲ್ಲ. ನಾನು ಎಲ್ಲ ತನಿಖೆಗೂ ಸಿದ್ದನಿದ್ದೇನೆ. ಸಿಬಿಐ ತನಿಖೆಗೂ ಬೇಕಿದ್ದರೆ ಕೊಡಲಿ. ಯಾಕೆಂದರೆ ನಾನು ನಿರಪರಾಧಿ. ಸಿಎಂ, ಡಿಸಿಎಂ ಕೂಡ ಧೈರ್ಯದಿಂದ ತನಿಖೆ ಎದುರಿಸಲಿ ಎಂದು ತಿರುಗೇಟು ನೀಡಿದ್ದಾರೆ.