ಹೈದರಾಬಾದ್: ಹೈದರಾಬಾದ್ನ ಬಾಲಾಪುರ ಗಣೇಶನ ಚಿನ್ನದ ಲೇಪಿತ ಲಡ್ಡು ಈ ವರ್ಷ ಬರೋಬ್ಬರಿ 24.64 ಲಕ್ಷ ರೂ. ಗೆ ಹರಾಜಾಗಿದೆ. ಈ ಲಡ್ಡು ಹರಾಜಿನಲ್ಲಿ ವಂಗೇಟಿಲಕ್ಷ್ಮಾ ರೆಡ್ಡಿ ಗೆದ್ದಿದ್ದಾರೆ. ಹರಾಜಿನಲ್ಲಿ ಸುಮಾರು 18 ಮಂದಿ ಭಾಗವಹಿಸಿದ್ದರು.
ಬಾಲಾಪುರ ಲಡ್ಡನ್ನು 2021ರಲ್ಲಿ 18.9 ಲಕ್ಷಕ್ಕೆ ಲಡ್ಡು ಖರೀದಿಸಲಾಗಿತ್ತು. ಈ ವರ್ಷ್ ಆ ದಾಖಲೆಯನ್ನು ಮುರಿದಿದೆ. ವಂಗೇಟಿ ಲಕ್ಷ್ಮಾ ರೆಡ್ಡಿ ಅವರು 24.6 ಲಕ್ಷಗಳ ಅತ್ಯಧಿಕ ಬಿಡ್ನೊಂದಿಗೆ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು.
ಬಾಲಾಪುರ ಲಡ್ಡನ್ನು ಅತ್ಯಂತ ಮಂಗಳಕರ ಮತ್ತು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಪೂಜೆ ಸಲ್ಲಿಸಿದ ನಂತರ ಅದನ್ನು ಸ್ನೇಹಿತರು ಮತ್ತು ಹಿತೈಷಿಗಳಿಗೆ ಹಂಚಲಾಗುತ್ತದೆ ಮತ್ತು ಉತ್ತಮ ಬೆಳೆಗಾಗಿ ಹೊಲಗಳಲ್ಲಿ ಸಿಂಪಡಿಸಲಾಗುತ್ತದೆ. ಸ್ಥಳೀಯರು ಲಡ್ಡು ಗೆದ್ದರೆ ಹಣ ಪಾವತಿಸಲು ಮುಂದಿನ ವರ್ಷದವರೆಗೆ ಸಮಯಾವಕಾಶವಿದೆ. ಸ್ಥಳೀಯರಲ್ಲದವರು ಆಗ ಮತ್ತು ಅಲ್ಲಿಯೇ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಬಾಲಾಪುರ ಲಡ್ಡು ಹರಾಜು ಹಾಕುವ ಪದ್ಧತಿಯನ್ನು1994 ರಲ್ಲಿ ಪ್ರಾರಂಭಿಸಲಾಯಿತು. ಬಾಲಾಪುರ ಗ್ರಾಮದ ಕೋಲನ್ ಕೃಷ್ಣಾ ರೆಡ್ಡಿ ಅವರು ಆ ವರ್ಷ ಯಶಸ್ವಿ ಬಿಡ್ಡರ್ ಆಗಿ 450 ರೂಪಾಯಿಗೆ ಲಡ್ಡು ಪಡೆದಿದ್ದರು.
ಹರಾಜಿನಿಂದ ಬಂದ ಸ್ವಲ್ಪ ಮೊತ್ತವನ್ನು ಮುಂದಿನ ವರ್ಷದ ಗಣೇಶ ಪೂಜೆಯ ಆಚರಣೆಗಳಿಗೆ ಮೀಸಲಿಟ್ಟರೆ, ಉಳಿದ ಮೊತ್ತವನ್ನು ಸಂಘಟಕರು ಬಾಲಾಪುರ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸುತ್ತಾರೆ.