ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ಮಹತ್ವದ ಮಾಹಿತಿಯನ್ನು ಹೊರಹಾಕಿದೆ. ಅತಿಥಿ ಉಪನ್ಯಾಸಕರ ಕಾರ್ಯಭಾರ ಮತ್ತು ಗೌರವಧನಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಲಿಖಿತ ಉತ್ತರ ನೀಡಿದ್ದಾರೆ.
ಗೌರವಧನ ಹೆಚ್ಚಳ
ಈ ಹಿಂದೆ ಇದ್ದ ರೂ. 12,000/- ಗಳ ಗೌರವಧನವನ್ನು ಸರ್ಕಾರವು ಈಗಾಗಲೇ ರೂ. 14,000/- ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. (ಸರ್ಕಾರಿ ಆದೇಶ ಸಂಖ್ಯೆ: ಇಪಿ 137 ಎಸ್ಇಎಸ್ 2025, ದಿನಾಂಕ: 15-05-2025).
ವೇತನದ ಅವಧಿ
ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷದ 10 ತಿಂಗಳ ಅವಧಿಗೆ (ಜೂನ್ನಿಂದ ಮಾರ್ಚ್ವರೆಗೆ) ಗೌರವಧನವನ್ನು ಬಿಡುಗಡೆ ಮಾಡಲಾಗುತ್ತಿದೆ.
ಕಾರ್ಯಭಾರ ನಿಯಮ: ಪ್ರಸ್ತುತ ನಿಯಮದಂತೆ ವಾರಕ್ಕೆ 10 ರಿಂದ 12 ಗಂಟೆಗಳ ಕಾರ್ಯಭಾರವನ್ನು ನೀಡಲಾಗುತ್ತಿದೆ. ಯಾವುದೇ ವಿಷಯದಲ್ಲಿ ಇದಕ್ಕಿಂತ ಹೆಚ್ಚಿನ ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ವೇತನ ಪರಿಷ್ಕರಣೆ ಪ್ರಸ್ತಾವನೆ ಸದ್ಯಕ್ಕಿಲ್ಲ
ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ನೀಡುವ ಮಾದರಿಯಲ್ಲಿಯೇ ಪಿಯು ಅತಿಥಿ ಉಪನ್ಯಾಸಕರಿಗೂ ಪೂರ್ಣ ಕಾರ್ಯಭಾರ ನೀಡಿ ವೇತನ ಪರಿಷ್ಕರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಗೌರವಧನವನ್ನು ಹೆಚ್ಚಿಸಿರುವುದರಿಂದ ಸದ್ಯಕ್ಕೆ ಅಂತಹ ಯಾವುದೇ ಹೊಸ ಬದಲಾವಣೆಗಳ ಯೋಚನೆ ಇಲ್ಲ ಎಂದು ತಿಳಿದುಬಂದಿದೆ.









