ಬೆಂಗಳೂರು: ಪರಪ್ಪನ ಅಗ್ರಹಾರ ಜೈಲುಗಳಲ್ಲಿ ( parappana agrahara central jail ) ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದೆರಡು ಜೈಲುಗಳಲ್ಲಿ ಕೆಲವರು ಇದ್ದಾರೆ ಅದನ್ನು ಸರಿಪಡಿಸುತ್ತೇವೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಇವಾಗ ಬಹುತೇಕ ಹೊಸ ಸಿಬ್ಬಂದಿಗಳು ಇದ್ದಾರೆ ಎಂದರು.
ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಎಲ್ಲವನ್ನು ಹಿಡಿಯುತ್ತಿದ್ದಾರೆ. ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ ಐ ಆರ್ ಆಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಸಿಬ್ಬಂದಿಯ ವಿರುದ್ಧವೂ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ. ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಪರಪ್ಪನ ಅಗ್ರಹಾರದಲ್ಲಿ 4 ಜಿ ಜಾಮರ್ ಹಾಕಲಾಗುವುದು. ಅತ್ಯಂತ ಶೀಘ್ರವಾಗಿ ಈ ಕ್ರಮ ಕೈಗೊಳ್ಳಲಾಗುವುದು. ಕೆಲವು ಸಿಬ್ಬಂದಿ ಅನಾಚಾರದಲ್ಲಿ ಕೈಜೋಡಿಸಿದ್ದರು ಆದರೆ ಇವಾಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.